ಯಾದಗಿರಿ: ನಾವು ಎಂದಿಗೂ ವೋಟ್ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಡುತ್ತೇವೆ. ಅಭಿವೃದ್ಧಿಯನ್ನೇ ಗಮನದಲ್ಲಿರಿಸಿಕೊಂಡು ರಾಜಕಾರಣ ಮಾಡುತ್ತೇವೆ. ಯಾದಗಿರಿ ಸಹಿತವಾಗಿ ದೇಶದ ನೂರಾರು ಇಂಥ ಜಿಲ್ಲೆಗಳಲ್ಲಿ ‘ಆಕಾಂಕ್ಷಿ ಜಿಲ್ಲೆ’ ಎನ್ನುವ ಹೊಸ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಹಲವು ಯೋಜನೆಗಳು ಶಂಕುಸ್ಥಾಪನೆ ಮತ್ತು ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಈ ಕ್ಷೇತ್ರವು ಅಭಿವೃದ್ಧಿ ಯಾತ್ರೆಯಲ್ಲಿ ಬಹಳ ಹಿಂದೆ ಬಿದ್ದಿತ್ತು. ಮೊದಲಿದ್ದ ಸರ್ಕಾರಗಳು ಯಾದಗಿರಿಯಂಥ ಹಲವು ಜಿಲ್ಲೆಗಳನ್ನು ಹಿಂದುಳಿದಿವೆ ಎಂದು ಘೋಷಿಸಿ ಕೈತೊಳೆದುಕೊಂಡಿದ್ದವು. ಅವರು ಮತಬ್ಯಾಂಕ್ ರಾಜಕಾರಣಕ್ಕೇ ಒತ್ತು ಕೊಟ್ಟರು. ಜಾತಿ, ಮತಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರು.
ಕರ್ನಾಟಕದಲ್ಲಿಂದು ಸಾವಿರಾರು ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನಾರಾಯಣಪುರ ಎಡದಂಡೆ ಯೋಜನೆಯ ವಿಸ್ತರಣೆ ಆಧುನೀಕರಣಗೊಳಿಸಲಾಗಿದೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೇರ ಲಾಭವಾಗಲಿದೆ. ಇದರಿಂದ ಯಾದರಿಗಿಯ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಸೂರತ್-ಚೆನ್ನೈ ಎಕನಾಮಿಕ್ ಕಾರಿಡರ್ನ ಕರ್ನಾಟಕದ ಭಾಗದ ಕೆಲಸವು ಇಂದಿನಿಂದ ಆರಂಭವಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಜನಜೀವನ ಸುಧಾರಿಸಲಿದೆ. ಉದ್ಯಮಗಳು ಹೆಚ್ಚಾಗಲಿವೆ ಎಂದು ಮೋದಿ ಹೇಳಿದರು.