ಜಮ್ಮು ಕಾಶ್ಮೀರ: ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು ಮೂವರು ಉಗ್ರರನ್ನು ಹೊಡೆದುರುಳಿಸಿದ ಘಟನೆ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಝೈನಾಪೋರಾ ಪ್ರದೇಶದ ಮುಂಜ್ ಮಾರ್ಗ್‌ನಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯು ನಂತರ ಎನ್‌ಕೌಂಟರ್‌ಗೆ ತಿರುಗಿತು. ಈ ಸಂದರ್ಭದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯೊಂದಿಗೆ ಸಂಬಂಧ ಹೊಂದಿದ್ದ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಗುರುತನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಬೇಕಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.