ನವದೆಹಲಿ: ದೇಶದ ಬಹುನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶಗಳು ಇಂದು ಪ್ರಕಟವಾಗಲಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ ಸತತ 7ನೇ ಬಾರಿ ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ ಎನ್ನುವುದು ತಿಳಿದು ಬಂದಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ಡಿ.1 ಹಾಗೂ 5 ರಂದು 2 ಹಂತದಲ್ಲಿ ಚುನಾವಣೆ ನಡೆದಿದ್ದು, ಒಟ್ಟು ಶೇ. 66.31 ರಷ್ಟು ಮತದಾನವಾಗಿದೆ. ಗುಜರಾತ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಇದೇ ಮೊದಲ ಬಾರಿ ಆಮ್ ಆದ್ಮಿ ಪಕ್ಷವು ಕಣಕ್ಕಿಳಿದಿದೆ. ಆದರೆ ತ್ರಿಕೋನ ಸ್ಪರ್ಧೆ ಹೊರತಾಗಿಯೂ ಬಿಜೆಪಿ ಬಹುಮತ ಬರುವ ಎಲ್ಲಾ ಸಾಧ್ಯತೆಗಳಿವೆ.
ಅದೇ ರೀತಿ ನ.12 ರಂದು ನಡೆದ ಹಿಮಾಚಲ ಪ್ರದೇಶದ ಮತ ಎಣಿಕೆ ಕಾರ್ಯವೂ ಇಂದು ಮುಂಜಾನೆ 8 ಗಂಟೆಗೆ ಆರಂಭವಾಗಿದೆ. ಒಟ್ಟು ಶೇ. 76.44 ರಷ್ಟು ಮತದಾನ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು, 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ 24-41, ಕಾಂಗ್ರೆಸ್ 20-40 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ. ಇನ್ನೂ ಕೆಲ ಸಮೀಕ್ಷೆಗಳು ಸ್ಪಷ್ಟ ಬಹುಮತ ಸಾಧಿಸಲಾಗದೇ ಅತಂತ್ರ ಸ್ಥಿತಿ ನಿರ್ಮಾಣವೂ ಆಗಬಹುದು ಎಂದು ಹೇಳಿವೆ.