ಸಿಬಿಎಸ್‌ಇ ವಿದ್ಯಾರ್ಥಿಗಳಿಗಾಗಿ ಕದಂಬ ಸಹೋದಯ ಕಾಂಪ್ಲೆಕ್ಸ್ ಸಾಂಸ್ಕೃತಿಕ ಉತ್ಸವ

ಕುಮಟಾ: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿ.ಜಿ.ಎಸ್ ಕೇಂದ್ರೀಯ ವಿದ್ಯಾಲಯದ ಆಶ್ರಯದಲ್ಲಿ ಜಿಲ್ಲೆಯ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕದಂಬ ಸಹೋದಯ ಕಾಂಪ್ಲೆಕ್ಸ್ ಸಾಂಸ್ಕೃತಿಕ ಉತ್ಸವವನ್ನು ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶ ನೀಡುತ್ತಿರುವ ಕದಂಬ ಸಹೋದಯ ಕಾಂಪ್ಲೆಕ್ಸ್ ಯೂನಿಟ್‌ನ ಯೋಜನೆ ಶ್ಲಾಘನೀಯ. ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುವುದಕ್ಕಿಂತ ಭಾಗವಹಿಸುವಿಕೆ ತುಂಬಾ ಮುಖ್ಯ. ಸಂಸ್ಕೃತದಿಂದ ಸಂಸ್ಕೃತಿ, ಸಂಸ್ಕೃತಿಯಿಂದ ಸಂಸ್ಕಾರ ಉಂಟಾಗುತ್ತದೆ. ಸಂಸ್ಕೃತದಲ್ಲಿಯೇ ಎಲ್ಲ ವೇದೋಪನಿಷತ್ತುಗಳು ಬರೆಯಲ್ಪಟ್ಟಿವೆ. ಸಂಸ್ಕೃತವನ್ನು ಎಲ್ಲರೂ ಕಲಿಯುವುದು ಉತ್ತಮ ಎಂದು ಆಶೀರ್ವಚನ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ 11 ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ನೃತ್ಯ, ಹಾಡು, ಲೀಫ್ ಕೊಲೆಜ್, ಆಶುಭಾಷಣ, ಬೆಸ್ಟ್ ಔಟ್ ಆಫ್ ವೇಸ್ಟ್ ಹೀಗೆ ವಿವಿಧ ಸ್ಪರ್ಧೆಗಳ ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಭಾಗವಹಿಸಿದ್ದರು.
ಈ ವೇಳೆ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಪ್ರಜ್ವಲ್ ಪಟಗಾರ ಮತ್ತು ಎಲ್ಲಾ ಸ್ಪರ್ಧೆಗಳಿಗೆ ಆಗಮಿಸಿದ ನಿರ್ಣಾಯಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಬಿಜಿಎಸ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ.ಗೌಡ, ನಿವೃತ್ತ ಪ್ರಾಂಶುಪಾಲ ಎಸ್.ಎನ್.ಭಟ್ಟ, ಶಿಕ್ಷಕರಾದ ಶ್ರೀಧರ್ ಗೌಡ ಉಪ್ಪಿನ ಗಣಪತಿ, ಹಾಲಕ್ಕಿ ಒಕ್ಕಲಿಗ ಮುಖಂಡರಾದ ಶಂಕರಗೌಡ, ರಾಮನಗರದ ಮೌಂಟ್ ಕಾರ್ಮೆಲ್ ಪ್ರಾಂಶುಪಾಲ ಫಾದರ್ ಅಂಥೋನ್ ಉಪಸ್ಥಿತರಿದ್ದರು.