ಚವತ್ತಿ ಭಾಗದಲ್ಲಿ ವಿಪರೀತ ಮಳೆ.! ತೋಟ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ.!

ಯಲ್ಲಾಪುರ: ತಾಲೂಕಿನ ಚವತ್ತಿ ಪ್ರದೇಶದಲ್ಲಿನ ಹೊಸ್ಮನೆ, ಕೂಮನಮನೆ, ಕುಂಬಾರಕುಳಿ, ಕಾಗೋಡು, ಅಂಬ್ಲಿಹೊಂಡ ಮುಂತಾದ ಊರುಗಳಲ್ಲಿ ಸೋಮವಾರ ಸಂಜೆ ವಿಪರೀತವಾಗಿ ಸುರಿದ ಮಳೆಗೆ ಅಪಾರ ಹಾನಿ ಉಂಟಾಗಿದೆ. ಹಳ್ಳಕೊಳ್ಳಗಳೆಲ್ಲ ತುಂಬಿ ಏರಿಗಳೊಡೆದು ತೋಟ, ಗದ್ದೆಗಳಿಗೆ ನೀರು ನುಗ್ಗಿ ನಷ್ಟವಾಗಿದೆ.

ಚವತ್ತಿ ಪ್ರದೇಶದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ರೈತರಿದ್ದು ಮಳೆಯ ನೀರು ತೋಟದಲ್ಲಿ ಆಳೆತ್ತರ ಹೋಗಿರುವುದರಿಂದ ಕಾಳುಮೆಣಸಿಗೆ ರೋಗ ಕಾಡಬಹುದೆಂದು ಆತಂಕ ಎದುರಾಗಿದೆ. ತೋಟಕ್ಕೆ ಹಾಕಿದ ಗೊಬ್ಬರ, ಮುಚ್ಚಿದ ಸಪ್ಪು, ಸದೆಗಳೆಲ್ಲ ನೀರುಪಾಲಾಗಿ ಕಾಲುವೆಗಳಲ್ಲಿ ಕೆಸರು ನಿಂತಿದೆ. ರೈತರಾದ ಪುಟ್ಟು ಗಿರಿಯಾ ಗೌಡ, ಅಣ್ಣು ಹನಮು ಗೌಡ, ಮಂಜುನಾಥ ಗಣಪತಿ ನಾಯ್ಕ, ದೇವೇಂದ್ರ ರಾಮಾ ನಾಯ್ಕ ಅವರ ಹೊಲದಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಗದ್ದೆಯಲ್ಲಿ ಕಲ್ಲು ಮಣ್ಣುಗಳ ರಾಶಿ ಬಿದ್ದಿದೆ.

ರೈತರಾದ ನಾರಾಯಣ ದುರ್ಗಾ ಪೂಜಾರಿ, ರವೀಂದ್ರ ಭಾಗ್ವತ್, ಗೌರಿ ಭಾಗ್ವತ್, ಎಂ.ಪಿ.ಹೆಗಡೆ, ಪ್ರಭಾಕರ ಹೆಗಡೆ, ಮಾಬ್ಲೇಶ್ವರ ಗೌಡ, ವೆಂಕಟ್ರಮಣ ಆರ್.ಹೆಗಡೆ, ಶಾಂತಾರಾಮ ಸುಬ್ರಾಯ ಹೆಗಡೆ, ಗುರು ಭಟ್ಟ, ರಮಾಕಾಂತ ಹೆಗಡೆ,ವಿಮಲಾ ರತ್ನಾಕರ ಭಾಗ್ವತ್, ಸುಧೀರ್ ಪಿ.ಬಲ್ಸೆ, ವಿಶ್ವಾಸ ಪಿ. ಬಲ್ಸೆ, ಶ್ರೀಧರ ಜಿ. ಭಟ್ಟ ಹೊಸ್ಮನೆ ಅವರ ತೋಟ ಗದ್ದೆಗಳಿಗೂ ನೀರುನುಗ್ಗಿ ಹಾನಿಯಾಗಿದೆ.

ಉಮ್ಮಚ್ಗಿ ಪಂಚಾಯಿತಿ ಅಧ್ಯಕ್ಷೆ ರೂಪಾ ಪೂಜಾರಿ, ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಗ.ರಾ.ಭಟ್ಟ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.