ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಸಂಜೆ ಏಕಾಏಕಿ ಭಾರಿ ಮಳೆ ಸುರಿದಿದ್ದು, ಗಣೇಶ ಚತುರ್ಥಿ ಹಬ್ಬದ ಸಂಭ್ರಮಕ್ಕೆ ನೀರೆರಚಿದೆ. ಬುಧವಾರ ಸಂಜೆ 4 ಗಂಟೆಯ ಹೊತ್ತಿಗೆ ಏಕಾಏಕಿ ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ಪಟ್ಟಣದ ವಿಶ್ವದರ್ಶನ ಸಂಸ್ಥೆ ಎದುರು, ಸಬಗೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ತುಂಬಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸರ್ಕಾರಿ ಪಿಯು ಕಾಲೇಜಿನ ಬಳಿ ಎರಡು ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.
ಗ್ರಾಮೀಣ ಭಾಗದಲ್ಲೂ ಮಳೆಯಿಂದ ಅವಾಂತರ ಉಂಟಾಗಿದ್ದು, ಆನಗೋಡ, ದೋಣಗಾರ, ಇಡಗುಂದಿ, ನಂದೊಳ್ಳಿ ಭಾಗದಲ್ಲಿ ಹಳ್ಳಗಳು ತುಂಬಿ ಹರಿದವು. ಅಡಕೆ ತೋಟ, ಭತ್ತದ ಗದ್ದೆಗಳು ಜಲಾವ್ರತವಾದವು. ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲಿನಿಂದ ಕೆಳಾಸೆಗೆ ಹೋಗುವ ರಸ್ತೆಯಲ್ಲಿ ಹಳ್ಳ ಸೇತುವೆಯ ಮೇಲೆ ಹರಿದು ಓಡಾಟಕ್ಕೆ ತೊಂದರೆ ಉಂಟಾಯಿತು.