ಚಂದಗುಳಿ ಗ್ರಾ. ಪಂ ಸಭಾಭವನದಲ್ಲಿ ಛದ್ಮವೇಷ ಸ್ಪರ್ಧೆ

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತ ಆಶ್ರಯದಲ್ಲಿ, ಗ್ರಾ.ಪಂ. ಚಂದಗುಳಿ ವ್ಯಾಪ್ತಿಯ ಮಕ್ಕಳಿಗಾಗಿ ಏರ್ಪಡಿಸಿದ್ದ ‘ರಾಧಾ-ಕೃಷ್ಣ ವೇಷ ಸ್ಪರ್ಧೆ-2022’ನ್ನು ಉಪಳೇಶ್ವರದಲ್ಲಿರುವ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೇತ್ರಾವತಿ ಹೆಗಡೆ ಕಬ್ಬಿನಗದ್ದೆ ಮಾತನಾಡಿ, ನಮ್ಮೂರಿನ ಪುಟ್ಟ ಪುಟ್ಟ ಮಕ್ಕಳು ರಾಧಾ-ಕೃಷ್ಣರ ವೇಷವನ್ನು ತೊಟ್ಟು ವೇದಿಕೆಯನ್ನೇರುವುದೇ ಒಂದು ಸಂಭ್ರಮ. ಇಂದು ಮಕ್ಕಳಿಗೆ ಬೇರೆ ಬೇರೆ ರಂಗಗಳಲ್ಲಿ ಭಾಗವಹಿಸಿ, ಜೀವನದಲ್ಲಿ ಮುಂದೆ ಬರಲು ಅವಕಾಶಗಳಿವೆ. ಮಕ್ಕಳ ಏಳ್ಗೆಯನ್ನು ಕಂಡು ಪ್ರೋತ್ಸಾಹ ನೀಡುವ ತಂದೆ-ತಾಯಿ, ಗುರುಹಿರಿಯರ ಜೊತೆಗೆ ಇಡೀ ಸಮಾಜ ಅವರ ಪ್ರಗತಿಗೆ ಬೆನ್ನುತಟ್ಟುತ್ತಿದೆ. ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರುವ ಜವಾಬ್ದಾರಿ ಮಕ್ಕಳದ್ದು. ಚಿಕ್ಕ ವಯಸ್ಸಿನಲ್ಲೇ ಇಂತ‌ಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಮಕ್ಕಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಎಲ್ಲ ಮಕ್ಕಳೂ ಜೀವನದಲ್ಲಿ ಸಾಧನೆ ಮಾಡಿ ನಾಡಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಪುಟ್ಟ ಪುಟ್ಟ ಮಕ್ಕಳು ರಾಧೆ-ಕೃಷ್ಣರ ವೇಷವನ್ನು ತೊಟ್ಟು ಸಂಭ್ರಮಿಸಿದ್ದು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಜೇಶ್ ಶೇಟ್, ನರೇಗಾ ತಾಲೂಕಾ ಸಂಯೋಜಕರಾದ ಗಿರಿಧರ ನಾಯ್ಕ, ಗ್ರಾ. ಪಂ. ಉಪಾಧ್ಯಕ್ಷೆ ಶಾಂತಿ ಪಟಗಾರ್, ಪಂಚಾಯತ್ ಸದಸ್ಯರಾದ ಆರ್. ಎಸ್. ಭಟ್ ದೇಸಾಯಿಮನೆ, ಸುಬ್ಬಣ್ಣ ಉದ್ದಾಬೈಲ್ ಹಾಗೂ ಇತರರು ಉಪಸ್ಥಿತರಿದ್ದರು.