ಮಾನಸಿಕ ಅಸ್ವಸ್ಥನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ.! ಗಾಯಗೊಂಡ ವ್ಯಕ್ತಿ ಸಾವು.!

ಬೆಳಗಾವಿ: ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಾಲೂಕಿನ ಬಸವನಕುಡಚಿ ಗ್ರಾಮದ ಗಾಂಧಿ ಗಲ್ಲಿಯ ನಿವಾಸಿ ವಿಶಾಲ ಕಲ್ಲಪ್ಪಾ ಪಟಾಯಿ (28) ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿ.

ಕಳೆದ ನಾಲ್ಕು ದಿನಗಳ ಹಿಂದೆ ಮಾನಸಿಕ ಅಸ್ವಸ್ಥನಂತೆ ಗ್ರಾಮಗಳಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ.ಇದಲ್ಲದೇ ನಾಲ್ಕು ದಿನಗಳ ಹಿಂದೆ ಸುಮಾರು 9 ಶಿಕ್ಷಕರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಗಾಯಗೊಂಡ ಶಿಕ್ಷಕರಿಗೆ ಚಿಕಿತ್ಸೆ ನೀಡಲಾಗಿದೆ.

ಅದೇ ದಿನ ಸಾಯಂಕಾಲ ಗ್ರಾಮದ ಕೆಲ ಜನ ಸೇರಿಕೊಂಡು ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ನಂತರ ಈತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.