ಉತ್ಥಾನ ಕಲಾ ಭವನದಲ್ಲಿ ಕವಿತೆಗಳ ಕಲರವಸುಸಂಪನ್ಬಗೊಂಡ ನಿನಾದ ಯುಗಾದಿ ಸಾಹಿತ್ಯ ಸಂಭ್ರಮ 2026

ಭಟ್ಕಳ-

ಜಿಲ್ಲೆಯ ಜನಪ್ರಿಯ ಸಾಹಿತ್ಯ ಕಲಾತ್ಮಕ ಸಂಘಟನೆ ನಿನಾದ ಕಲ್ಚರಲ್ ಅಕಾಡೆಮಿಯ ಹತ್ತನೇ ವರ್ಷದ ವರ್ಷಾಚರಣೆ ಹಾಗೂ ಯುಗಾದಿ ನಿಮಿತ್ತ ನಿನಾದ ಯುಗಾದಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಗುರುವಾರ ನಡೆಯಿತು. ತಾಲೂಕಿನ ಮುಂಡಳ್ಳಿ ಯಲ್ಲಿ ಹೊಸದಾಗಿ ಆರಂಭವಾದ ಉತ್ಥಾನ ಕಲಾಭವನದಲ್ಲಿ ಯುಗಾದಿ ಸಾಹಿತ್ಯ ಸಂಭ್ರಮ ಹಾಗೂ ಕವಿಕಾವ್ಯ ಸಿಂಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಉತ್ತರ ಕನ್ನಡದ ನಿಕಟ ಪೂರ್ವ ಅಧ್ಯಕ್ಷ ಅರವಿಂದ್ ಕರ್ಕಿಕೋಡಿ ಮಾತನಾಡಿ ನಿನಾದ ಎಲ್ಲ ಸಂಘಟನೆಯಂತಲ್ಲ ಇದು ಎಲ್ಲರ ನಿನಾದ. ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ಯುಗಾದಿ ನೆಪದಲ್ಲಿ ಎಲ್ಲ ಅಪ್ತ ವಲಯಗಳು ಸೇರಿ ಈ ರೀತಿಯಾಗಿಯೂ ಹಬ್ಬವನ್ನು ಆಚರಿಸಬಹುದು ಎನ್ನುವುದನ್ನು ನಿನಾದದಿಂದ ಕಲಿಯಬಹುದಾಗಿದೆ. ನಿನಾದ ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಿರದೆ ಸಂಗೀತ, ನೃತ್ಯ ಜನಪದ ಹೀಗೆ ಕಲೆಯ ಎಲ್ಲಾ ಪ್ರಾಕಾರಗಳಿಗೆ ಪ್ರಾಮುಖ್ಯತೆ ನೀಡುವ ಸಂಘಟನೆಯಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದರು.

ಕವಿ- ಕಾವ್ಯ- ಸಿಂಚನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿಗಳಾದ ಶಂಭು ಹೆಗಡೆ ಮಾನಸುತ ಅವರು ಮಾತನಾಡುತ್ತಾ ನಿನಾದ ಯುಗಾದಿ ಸಂಭ್ರಮ ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ, ಇಲ್ಲಿ ಸಾಹಿತ್ಯ ಸಂಗೀತ ನೃತ್ಯ ಚಿತ್ರಕಲೆ ಎಲ್ಲವೂ ಮೇಳೈಸಿದೆ.ಎಲ್ಲರನ್ನೂ ಗೌರವಿಸಿದಂತ ಆಪ್ತ ವೇದಿಕೆ ಎಂದರು. ಇಲ್ಲಿ ಬಂದಂತ ಕವಿಗಳೆಲ್ಲರೂ ಸತ್ವಪೂರ್ಣ ಕವಿತೆಗಳನ್ನೇ ವಾಚಿಸಿದ್ದು ಇನ್ನಷ್ಟು ಖುಷಿ ಕೊಟ್ಟಿತು ಎಂದರು.

ಸರಕಾರದ ಯಾವುದೇ ಸಹಾಯ ಸಹಕಾರ ಇಲ್ಲದೆಯೂ ಯಾರೊಬ್ಬರ ಸಹಾಯ ಬಯಸದೆಯೂ ಕಲೆಗಾಗಿ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಕಲಾತ್ಮಕ ಸೇವೆಯನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬರುತ್ತಿರುವ ನಿನಾದದ ನಡೆ ಶ್ಲಾಘನೀಯ ಎನ್ನುತ್ತಾ ತಮ್ಮ ಎರಡು ಕವಿತೆಗಳನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಅರವಿಂದ್ ಕರ್ಕಿಕೋಡಿ, ಸಾಹಿತಿ ಮಾನಾಸುತ ಹಾಗೂ ಚಿತ್ರಕಲಾವಿದ ಶಿಕ್ಷಕ ಸಂಜಯ ಗುಡಿಗಾರ ಅವರನ್ನು ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಫಲತಾಂಬೂಲ ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.

ನಂತರ ನಡೆದ ಕವಿ ಕಾವ್ಯ ಸಿಂಚನದಲ್ಲಿ ಕವಿಗಳಾದ ಪೂರ್ಣಿಮಾ ನಾಯ್ಕ ಮುರುಡೇಶ್ವರ, ,ವಿಭಾ ನಾಯಕ ಚಿತ್ರಾಪುರ,ಸುಮಲತಾ ರಾಜೇಶ, ರಮ್ಯ ವಿನಯ್ ಉಡುಪಿ,ಸವಿತಾ ನಾಯ್ಕ ಮುಂಡಳ್ಳಿ, ಕುಸುಮಾ ನಾಯ್ಕ ಹನೆಹಳ್ಳಿ, ರೇಷ್ಮಾ ಉಮೇಶ, ಉಮೇಶ ಮುಂಡಳ್ಳಿ, ಕುಮಾರಿ ಮೋನಿಕಾ ನಾಯ್ಕ, ಕುಮಾರ ಚರಣ ನಾಯ್ಕ ಕವಿತೆ ವಾಚಿಸಿದರು.

ನಿನಾದದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಅವರು ನಿನಾದ ನಡೆದ ಬಂದು ದಾರಿ ಹಾಗೂ ನಿನಾದ ಮುಂದಿನ ಆಶೋತ್ತರಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ನುಡಿದರು. ಮೊದಲಿಗೆ ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಎಪ್ರಿಲ್ ತಿಂಗಳಲ್ಲಿ ಉತ್ಥಾನ ಕಲಾಭವನದಲ್ಲಿ ನಡೆಯುವ ಸಂಭವನೀಯ ಕಾರ್ಯಕ್ರಮ ಭಜನೆ ಜನಪದ ಕಮ್ಮಟ ಹಾಗೂ ಕಲಾತ್ಮಕ ಸಿನೇಮೋತ್ಸವ ಬಗ್ಗೆ ಮಾಹಿತಿ ನೀಡಿ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ಉತ್ಥಾನ ಉಮೇಶ ಪ್ರಾರ್ಥಿಸಿದರು, ಕುಮಾರಿ ಹರ್ಷಿತಾ ಪಡಿಯಾರ ಭರತನಾಟ್ಯ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಕುಮಾರಿ ನಿನಾದ ಉಮೇಶ ಕಾರ್ಯಕ್ರಮ ನಿರ್ವಹಿಸಿದರು. ಮುಂಡಳ್ಳಿ ಗ್ರಂಥ ಪಾಲಕ ಸುರೇಶ ನಾಯ್ಕ, ತಾಲೂಕು ಪಂಚಾಯತ್ ಭಟ್ಕಳದ ಸಿಬ್ಬಂದಿಗಳಾದ ಗೋಪಾಲ ನಾಯ್ಕ ದಿನೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.