ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ, ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ಜೋಯಿಡಾ ಪೊಲೀಸರು ಬಂಧಿಸಿದ್ದಾರೆ. ಜಾತ್ರೆಯ ವಾಹನ ಪಾರ್ಕಿಂಗ್ ಪ್ರದೇಶವನ್ನೇ ಅಡ್ಡೆ ಮಾಡಿಕೊಂಡು ಜೂಜಾಡುತ್ತಿದ್ದವರ ವಿರುದ್ಧ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಒಟ್ಟು 24,420 ರೂಪಾಯಿ ನಗದು ಹಾಗೂ ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾತ್ರೆಗೆ ಬಂದ ಭಕ್ತರ ಸೋಗಿನಲ್ಲಿ ಕೆಲವರು ವಾಹನ ನಿಲುಗಡೆಗೆ ಮೀಸಲಿಟ್ಟಿದ್ದ ತೆರೆದ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ‘ಅಂದರ್-ಬಾಹರ್’ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಜೋಯಿಡಾ ಪೊಲೀಸರು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದಾರೆ. ಮೊದಲ ದಾಳಿಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಬಂಧಿಸಿ, ಅವರಿಂದ 20,700 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಅದೇ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇತರೆ ಐವರನ್ನು ಬಂಧಿಸಿ, 3,720 ರೂಪಾಯಿ ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತರೆಲ್ಲರೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನವರಾಗಿದ್ದಾರೆ. ಆರೋಪಿಗಳಾದ ಬಸವರಾಜ ಮಡ್ಡಿಕರ, ಮಂಜುನಾಥ ಬೂದಿಹಾಳ, ಚಂದ್ರಪ್ಪ ಸಣ್ಣಮಣಿ, ಈರಪ್ಪ ಜಕಾತಿ, ಮೂದಕಪ್ಪ ತಳವಾರ, ಶಿವಾನಂದ ಬಾಗೇವಾಡಿ, ಮಹೇಶ ನಾಯಕ, ನಾಗರಾಜ ಶಿರೂರ, ಬಾಳಪ್ಪ ಕಡಕಬಾವಿ ಮತ್ತು ರಿಜ್ವಾನ್ ಮಹಮ್ಮದಸಾಬ್ ಅವರ ವಿರುದ್ಧ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವಿತ್ರ ಜಾತ್ರಾ ಮಹೋತ್ಸವದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಜೋಯಿಡಾ ಪೊಲೀಸರು ಎಚ್ಚರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸುವುದು ಕಾನೂನು ಸುವ್ಯವಸ್ಥೆಯ ಉಲ್ಲಂಘನೆಯಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.

