ಬಸ್‌ ಡೀಸೆಲ್‌ ಟ್ಯಾಂಕ್‌ಗೆ ಟ್ರಕ್‌ ಡಿಕ್ಕಿ: ದುರಂತಕ್ಕೆ ಕಾರಣ – ಸೀಬರ್ಡ್‌ ಮಾಲೀಕ

ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌  ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು   ತಿಳಿಸಿದ್ದಾರೆ. ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು ಎಂದು ಹೇಳಿದರು.  

ಬಸ್ಸಿನ ಕ್ಲೀನರ್‌ ಸಾಧಿಕ್‌ ಪ್ರತಿಕ್ರಿಯಿಸಿ, ರಾತ್ರಿ 1:30 ರಿಂದ 2 ಗಂಟೆಯ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಲಗಿದ್ದ ಬಸ್ಸಿನಿಂದ ನಾನು ಹೊರ ಬಿದ್ದಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿಯತೊಡಗಿತು. ಡ್ರೈವರ್ ಹೊರ ಬಿದ್ದಿದ್ದು ಅವರ ಕಾಲು ಕೈಗಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನು ಆಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೆವು ಎಂದು ತಿಳಿಸಿದರು. 

ಸಾಧಾರಣವಾಗಿ ಸ್ಲೀಪರ್‌ ಕೋಚ್‌ ಬಸ್ಸಿನಲ್ಲಿ ಪ್ಲೈವುಡ್‌ಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಮಲಗಲು ಕುಶನ್‌ ಸಹ ಇರುತ್ತದೆ. ಬೆಂಕಿ ಬಿದ್ದ ತಕ್ಷಣವೇ ಕುಶನ್‌ ಮತ್ತು ಪ್ಲೈವುಡ್‌ ಇರುವ ಕಾರಣ ಬಹಳ ಬೇಗ ಬೆಂಕಿ ಹರಡುತ್ತದೆ.