ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಕಾರವಾರದ ತಹಶೀಲ್ದಾರ್ ಕಚೇರಿಗಳಿಗೆ ಸತತ ಎರಡು ದಿನಗಳ ಅಂತರದಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪರಿಶೀಲನೆಯ ನಂತರ ಇದೊಂದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.

ಮಂಗಳವಾರ ಭಟ್ಕಳ ತಹಶೀಲ್ದಾರ್ ಕಚೇರಿಗೆ ಮೊದಲ ಬೆದರಿಕೆ ಸಂದೇಶ ಬಂದಿದ್ದರೆ, ಬೆಳಿಗ್ಗೆ ಕಾರವಾರದ ತಹಶೀಲ್ದಾರ್ ಕಚೇರಿಗೆ ಇದೇ ರೀತಿಯ ಸಂದೇಶ ರವಾನೆಯಾಗಿದೆ. ಈ ಘಟನೆಗಳು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದವು. ಕಾರವಾರ ತಹಶೀಲ್ದಾರ್ ಕಚೇರಿಗೆ ಬಂದ ಇ-ಮೇಲ್ ಗಮನಿಸಿದ ತಕ್ಷಣ ತಹಶೀಲ್ದಾರ್ ನಿಶ್ಕಲ್ ನರೋನ್ಹಾ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಶ್ವಾನದಳದೊಂದಿಗೆ ಕಚೇರಿಯನ್ನು ಸಂಪೂರ್ಣವಾಗಿ ಜಾಲಾಡಿದರು. ತಪಾಸಣೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ವಂಚನೆಯ ಕೃತ್ಯ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಘಟನೆಯ ಕುರಿತು ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., “ಭಟ್ಕಳ ಮತ್ತು ಕಾರವಾರ ಕಚೇರಿಗಳಿಗೆ ಬಂದಿರುವ ಇ-ಮೇಲ್ ಬೆದರಿಕೆಗಳೆರಡೂ ಒಂದೇ ಮಾದರಿಯಲ್ಲಿದ್ದು, ತನಿಖೆ ಮುಂದುವರಿದಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ಇದೇ ರೀತಿ ಬೆದರಿಕೆ ಬಂದಾಗ ಆರೋಪಿಯನ್ನು ಬಂಧಿಸಲಾಗಿತ್ತು,” ಎಂದು ನೆನಪಿಸಿದರು.
ಇ-ಮೇಲ್ ಕಳುಹಿಸಿದವರ ಮೂಲವನ್ನು ಪತ್ತೆಹಚ್ಚಲು ಸೈಬರ್ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ, ಜಿಲ್ಲೆಯ ಇತರ ಸರ್ಕಾರಿ ಕಚೇರಿಗಳಿಗೂ ಇಂತಹ ಬೆದರಿಕೆಗಳು ಬಂದಿವೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಎರಡೂ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ಎಸ್ಪಿ ದೀಪನ್ ಎಂ.ಎನ್. ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
