ಪ್ರಯಾಣಿಕರ ಅನುಕೂಲಕ್ಕೆ ಕ್ರಿಸ್ಮಸ್–ಹೊಸ ವರ್ಷದ ವಿಶೇಷ ರೈಲು ವ್ಯವಸ್ಥೆ

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಸೌತ್ ವೆಸ್ಟರ್ನ್ ರೈಲ್ವೇ ವಿಶೇಷ ರೈಲುಗಳನ್ನು ಘೋಷಿಸಿದೆ. ಹುಬ್ಬಳ್ಳಿ–ಯಶವಂತಪುರ–ವಿಜಯಪುರ ಮಾರ್ಗದಲ್ಲಿ ಡಿಸೆಂಬರ್ 24ರಂದು ವಿಶೇಷ ರೈಲು ಸಂಚರಿಸಲಿದೆ. ಜೊತೆಗೆ, ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆ ಡಿಸೆಂಬರ್ 17, 20, 21 ಹಾಗೂ 24ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇನ್ನು ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.

 ಕ್ರಿಸ್ಮಸ್​​ ಹಾಗೂ ಹೊಸ ವರ್ಷದ ಸಂದರ್ಭದಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 24ರಂದು ಹುಬ್ಬಳ್ಳಿ ಮತ್ತು ವಿಜಯಪುರವನ್ನು ಸಂಪರ್ಕಿಸುವ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೌತ್​​ ವೆಸ್ಟರ್ನ್​​ ರೈಲ್ವೇ ತಿಳಿಸಿದೆ. ರೈಲು ಸಂಖ್ಯೆ 07379 ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ 06277 ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮೂಲಕ ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪಲಿದೆ.

ಕೆಲ ರೈಲುಗಳ ಸಂಚಾರ ರದ್ದು

ರೈಲು ಸಂಖ್ಯೆ 16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16240 ಯಶವಂತಪುರ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12614 ಕೆಎಸ್‌ಆರ್ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಡಿಸೆಂಬರ್ 17 ಮತ್ತು 24ರಂದು ರದ್ದಾಗಿವೆ ಎಂದು ಪ್ರಕಟಣೆ ತಿಳಿಸಿದೆ.