ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ; ಆಡಳಿತ ಪಕ್ಷ v/s ವಿಪಕ್ಷಗಳ ಮಧ್ಯೆ ಫೈಟ್

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಕುಂದಾನಗರಿ ಸಜ್ಜಾಗಿದೆ. ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆ ಇದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ದೋಸ್ತಿಗಳು ಸಜ್ಜಾಗಿವೆ. ವಿಪಕ್ಷಗಳ ಅಸ್ತçಗಳನ್ನು ಎದುರಿಸಲು ಸರ್ಕಾರ ಕೂಡ ರೆಡಿಯಾಗಿದೆ. ಸಿಎಂ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಹಿನ್ನೆಲೆ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ ಬಿಜೆಪಿ ಚಿಂತಿಸಿತ್ತು. ಆದರೆ, ಈಗ ತನ್ನ ನಿರ್ಧಾರದಿಂದ ಕಮಲಪಡೆ ಹಿಂದೆ ಸರಿದಿದೆ. 

ಬದಲಾದ ರಾಜಕೀಯ ಸನ್ನಿವೇಶ, ಸರ್ಕಾರದ ವಿವಾದಾತ್ಮಕ ನಡೆಗಳು ಮತ್ತು ಉತ್ತರ ಕರ್ನಾಟಕದ ಜನರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ವಿಶೇಷ ಗಮನ ಸೆಳೆಯುತ್ತಿದೆ. ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ. ಸಂತಾಪದ ಬಳಿಕ ಕಲಾಪವನ್ನು ಮುಂದೂಡಲು ಸ್ಪೀಕರ್ ತೀರ್ಮಾನಿಸಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಈಗಾಗಲೇ ಈಗ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ಧವಾಗಿವೆ. ಕಾಂಗ್ರೆಸ್ ಶಾಸಕರಲ್ಲೇ ಮುಂದುವರಿದ ಬಣಗಾರಿಕೆ, ದಿಲ್ಲಿ ಯಾತ್ರೆ, ನಾಯಕತ್ವ ಬದಲಾವಣೆ ಚರ್ಚೆ, ಬ್ರೇಕ್‌ಫಾಸ್ಟ್-ಲಂಚ್-ಡಿನ್ನರ್ ಸಭೆಗಳ ಪ್ರಸ್ತಾಪ, ಇವೆಲ್ಲವೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಿವೆ. ಪ್ರತಿಪಕ್ಷಗಳು ಈ ಒಳಗಿನ ಗೊಂದಲವನ್ನೂ ಆಯುಧವಾಗಿ ಬಳಸಿಕೊಳ್ಳಲಿವೆ.