ಕನ್ನಡ ಚಿತ್ರರಂಗ ಮತ್ತೊಂದು ಹಿರಿಯ ಕೊಂಡಿಯನ್ನು ಕಳೆದುಕೊಂಡಿದೆ. ಪ್ರಸಿದ್ಧ ಹಾಸ್ಯನಟ ಎಂ.ಎಸ್. ಉಮೇಶ್ (80) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಉಮೇಶ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು, ಚಿತ್ರರಂಗದ ಕಲಾವಿದರು, ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರ ಸಂತಾಪ
“ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳಿಂದ ಪ್ರೇಕ್ಷಕರನ್ನು ನಗಿಸಿದ್ದ ಹಿರಿಯ ಕಲಾವಿದರಿಗೆ ಭಾವಪೂರ್ಣ ವಿದಾಯಗಳು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ,” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರ ಶ್ರದ್ಧಾಂಜಲಿ
“ಪ್ರಖ್ಯಾತ ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಮನ ಕಲೆಹರಿಸಿದೆ. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸಿದ ಅವರು, ‘ಗುರುಶಿಷ್ಯರು’, ‘ಹಾಲು ಜೇನು’, ‘ಅಪೂರ್ವ ಸಂಗಮ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕಲಾವಿದ,” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿ.ವೈ. ವಿಜಯೇಂದ್ರರ ಸಂತಾಪ
“ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಅವರ ನಿಧನ ಅತ್ಯಂತ ದುಃಖಕರ. ಐದಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ತಮ್ಮ ವಿಶಿಷ್ಟ ಅಭಿನಯ ಹಾಗೂ ಮಾತಿನ ಶೈಲಿಯಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಗಲಿಕೆಯಿಂದ ಚಿತ್ರರಂಗ ದೊಡ್ಡ ನಷ್ಟಕ್ಕೆ ಗುರಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ವಿಜಯೇಂದ್ರ ಹೇಳಿದ್ದಾರೆ.


