ಬೆಂಗಳೂರು ಮೆಟ್ರೋ ನಿರ್ದೇಶಕರಾಗಿ ಸುಬ್ರಹ್ಮಣ್ಯ ಗುಡ್ಗೆ

ಹೊನ್ನಾವರ ನ. 23: ಮುಗ್ವಾ ಸುಬ್ರಹ್ಮಣ್ಯ ಮೂಲದ ಸುಬ್ರಹ್ಮಣ್ಯ ಗುಡ್ಗೆ ಬೆಂಗಳೂರು ಮೆಟ್ರೋ ರೈಲ್ವೆ ಕಾಮಗಾರಿಯ ಪ್ರೊಜೆಕ್ಟ್ ಮತ್ತು ಪ್ಲಾನಿಂಗ್ ನಿರ್ದೇಶಕರಾಗಿ ಪದೋನ್ನತಿಗೊಂಡಿದ್ದಾರೆ. 2007ರಿಂದ ಬೆಂಗಳೂರು ಮೆಟ್ರೋ ಸುರಂಗ ಕಾಮಗಾರಿಯಲ್ಲಿ ವಿವಿಧ ಹುದ್ದೆ ನಿರ್ವಹಿಸುತ್ತಾ ಬಂದಿರುವ ಗುಡ್ಗೆಯವರು ಬಹುಮಹಡಿಗಳ ಕಾಂಕ್ರೀಟ್ ಕಾಡಿನ ಬೆಂಗಳೂರಿನಲ್ಲಿ ಮೆಟ್ರೋ ನಿರ್ವಹಿಸುವ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಿದ ಕಾರಣ ಈ ಹುದ್ದೆ ದೊರಕಿದೆ.

ಬೆಂಗಳೂರು ಮೆಟ್ರೋದ ಭೂಗತ ಸ್ಟೇಷನ್, ಸುರಂಗ ಮಾರ್ಗಕ್ಕೆ ಸಂಬಂಧಿಸಿದ ಭೂವಶೀಕರಣದಿಂದ ಆರಂಭಿಸಿ ಎಲ್ಲ ಕೆಲಸವನ್ನು ನಿರ್ವಹಿಸಿದ ಗುಡ್ಗೆಯವರು ಬೋರಿಂಗ್ ಮಿಷನ್ ಬಳಸಿ ಬೆಂಗಳೂರು ಮೆಟ್ರೋದ ಮೊದಲ ಹಂತವನ್ನು ಮುಗಿಸಿಕೊಟ್ಟಿದ್ದಾರೆ. 6 ಭೂಗತ ಸ್ಟೇಷನ್‌ಗಳು, 10 ಕಿ.ಮೀ. ಸುರಂಗಗಳನ್ನು ಮುಗಿಸಿಕೊಟ್ಟಿದ್ದಾರೆ. ಈ ಮೊದಲು ಕೊಂಕಣ ರೈಲ್ವೆ ಕಾಮಗಾರಿಯಲ್ಲಿ ನಿರ್ದೇಶಕ ಶ್ರೀಧರನ್ ಮತ್ತು ಹೊನ್ನಾವರ ಶರಾವತಿ ರೈಲ್ವೆ ಸೇತುವೆ ಮತ್ತು ಸುರಂಗ ಮಾರ್ಗ ನಿರ್ಮಾಣದಲ್ಲಿ ಮುಖ್ಯ ಎಂಜಿನೀಯರ್ ನಾರಾಯಣನ್ ಅವರ ಜೊತೆ ಕೆಲಸ ಮಾಡಿ ನಿಗದಿತ ಅವಧಿಯಲ್ಲಿ ಮುಗಿಯುವಂತೆ ದುಡಿದವರಲ್ಲಿ ಗುಡ್ಗೆ ಒಬ್ಬರು. ಈ ಸೇತುವೆ ಸುರಂಗಗಳು ಕೊಂಕಣ ರೈಲ್ವೆಯ ಸುದೀರ್ಘ ಸುರಂಗ ಮತ್ತು ಸೇತುವೆಗಳಲ್ಲಿ ಒಂದಾಗಿದೆ.
ಸುಬ್ರಹ್ಮಣ್ಯ ಗುಡ್ಗೆ ಹಿರಿಯ ಸಂಸ್ಕೃತ ವಿದ್ವಾಂಸ ವಿ.ಜಿ. ಗುಡ್ಗೆ ಅವರ ಸಹೋದರ. ಗುಡ್ಗೆ ಕುಟುಂಬದ ಎಲ್ಲ ಸದಸ್ಯರು ಮತ್ತು ರೈಲ್ವೆಯ ನಿವೃತ್ತ ಹಿರಿಯ ಅಧಿಕಾರಿ ಜಿ. ನಾರಾಯಣನ್, ಉಮೇಶ ಹೆಗಡೆ ಅಬ್ಳಿ, ನಿವೃತ್ತ ಪ್ರಾಂಶುಪಾಲ ಎಸ್.ಜಿ. ಭಟ್, ಶಿಕ್ಷಕ ಕೆ.ವಿ. ಹೆಗಡೆ ಸಹಿತ ಮುಗ್ವಾ ಗ್ರಾಮದ ಹಲವು ಗಣ್ಯರು ಸುಬ್ರಹ್ಮಣ್ಯ ಗುಡ್ಗೆ ಅವರನ್ನು ಅಭಿನಂದಿಸಿದ್ದಾರೆ.