ಬೆಂಗಳೂರಿನ ಎಲ್ಲಾ ಕ್ಯಾಬ್‌ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್ ಅಳವಡಿಸಲು ಆದೇಶ

ಬೆಂಗಳೂರು, ನವೆಂಬರ್ 20: ಬೆಂಗಳೂರು ನಗರದ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ವೇಳೆ ನಾಗರಿಕರಿಂದ ಬರುತ್ತಿದ್ದ ದೂರುಗಳನ್ನು ಗಮನದಲ್ಲಿಟ್ಟು, ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಹೊಸ ಕ್ರಮ ಕೈಗೊಂಡಿದೆ. ನಗರದ ಎಲ್ಲಾ ಕ್ಯಾಬ್‌ಗಳಲ್ಲಿ 112 ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ಮೊಬೈಲ್ ಅಪ್ಲಿಕೇಶನ್ ಕುರಿತು ಮಾಹಿತಿಯಿರುವ ಸ್ಟಿಕ್ಕರ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿದೆ.

ಸಾರ್ವಜನಿಕರು, ವಿಶೇಷವಾಗಿ ಮಹಿಳಾ ಪ್ರಯಾಣಿಕರು, ತುರ್ತು ಸಂದರ್ಭಗಳಲ್ಲಿ ತಕ್ಷಣ ಸಹಾಯ ಪಡೆಯುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಜಾರಿಗೊಂಡಿದ್ದು, ಸ್ಟಿಕ್ಕರ್‌ಗಳು ಸ್ಪಷ್ಟವಾಗಿ ಗೋಚರಿಸುವಂತೆ ಇರಬೇಕೆಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ. ಡೆಕ್ಕನ್ ಹೆರಾಲ್ಡ್‌ ವರದಿ ಪ್ರಕಾರ, ಸಹಾಯವಾಣಿ ಮಾಹಿತಿಯ ಗೋಚರತೆ ಅಪರಾಧ ತಡೆಗಟ್ಟಲು ಮತ್ತು ಸಂಚಾರ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ.

ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿತವಾಗಿರುವ ಈ ಸ್ಟಿಕ್ಕರ್‌ಗಳನ್ನು ವಾಹನಗಳ ಎರಡೂ ಬದಿಗಳಲ್ಲಿ ಅಂಟಿಸುವುದು ಕಡ್ಡಾಯ. ಈಗಾಗಲೇ 12,000 ಕ್ಕೂ ಹೆಚ್ಚು ಕ್ಯಾಬ್‌ಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಉಳಿದ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸಲು ಗಡುವನ್ನೂ ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ನೀಡಲಾದ ಟೆಂಪ್ಲೇಟ್‌ನಲ್ಲಿ 112 ಸಹಾಯವಾಣಿ, ಜೊತೆಗೆ ನೇರವಾಗಿ ಕೆಎಸ್‌ಪಿ ಮೊಬೈಲ್ ಅಪ್ಲಿಕೇಶನ್‌ಗೆ ಸಂಪರ್ಕಿಸುವ QR ಕೋಡ್‌ ಸಲ್ಲಿಸಲಾಗುತ್ತದೆ. ದೂರದ ಪ್ರದೇಶಗಳಿಗೆ ಅಥವಾ ಒಂಟಿಯಾಗಿ ಪ್ರಯಾಣಿಸುವವರಿಗೆ ಇದು ಹೆಚ್ಚಿನ ನೆರವಾಗಲಿದೆ. ಈ ಸೇವೆ ಪೊಲೀಸ್ ಕಮಿಷನರ್ ಕಚೇರಿಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.

ತುರ್ತು ಸಂದರ್ಭಗಳಲ್ಲಿ 112 ಗೆ ಕರೆ ಮಾಡಿದರೆ ಸಾಮಾನ್ಯವಾಗಿ 15 ನಿಮಿಷಗಳೊಳಗೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸಲು ನಿರ್ಭಯಾ ನಿಧಿ ಯೋಜನೆಯಡಿ ಈ ‘ಏಕ-ಸಂಖ್ಯೆ’ ಸಹಾಯವಾಣಿ ಜಾರಿಗೆ ತರಲಾಗಿದೆ. ರಾತ್ರಿ ವೇಳೆಯ ಒಂಟಿ ಪ್ರಯಾಣಗಳಲ್ಲಿ ಯಾವುದೇ ಅಪಾಯ ಎದುರಾದರೆ ಕೂಡಲೇ ಸಹಾಯ ಪಡೆಯಲು ಈ ಸಂಖ್ಯೆ ಉಪಯುಕ್ತ.

112 ಗೆ ಕರೆ ಮಾಡಿದಾಗ ಮೊದಲು ಭಾಷೆ ಆಯ್ಕೆ ಮಾಡಬೇಕು. ನಂತರ ಅದು ಯಾವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ದೃಢಪಡಿಸಿ, ಸ್ಥಳ, ಸಮಸ್ಯೆ ಹಾಗೂ ಸಂಪರ್ಕ ವಿವರಗಳನ್ನು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.