ಆರ್‌ಸಿಬಿ ಲೇಡಿ ಸಿಂಗಂ ರಿಚಾ ಘೋಷ್‌ಗೆ ಡಿಎಸ್ಪಿ ಹುದ್ದೆ ನೀಡಿಕೆ

ಮೊಟ್ಟ ಮೊದಲ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸಾಧನೆಗೆ ದೇಶಾದ್ಯಂತ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತಂಡದ ಆಟಗಾರ್ತಿಯರಿಗೆ ಅವರ ರಾಜ್ಯ ಸರ್ಕಾರಗಳಿಂದ ಅಭಿನಂದನೆ ಮತ್ತು ಗೌರವ ದೊರೆಯುತ್ತಿದೆ. ಇದೇ ಸರಣಿಯಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಟೀಮ್ ಇಂಡಿಯಾದ ತಾರೆ ಆಟಗಾರ್ತಿ ರಿಚಾ ಘೋಷ್ ಅವರಿಗೆ ಗೌರವ ಸಲ್ಲಿಸಿದೆ.

2025ರ ವಿಶ್ವಕಪ್‌ನಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ಅವರು ಶುಕ್ರವಾರ ತಮ್ಮ ತವರು ಸಿಲಿಗುರಿಗೆ ಆಗಮಿಸಿದಾಗ ಭವ್ಯ ಸ್ವಾಗತ ದೊರೆಯಿತು. ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.

ನವೆಂಬರ್ 8ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 22 ವರ್ಷದ ರಿಚಾ ಅವರಿಗೆ ಡಿಎಸ್ಪಿ ಹುದ್ದೆ ನೀಡಿ ಗೌರವಿಸಿದರು. ಜೊತೆಗೆ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘ಬಂಗ ಭೂಷಣ’ ಪ್ರಶಸ್ತಿಯನ್ನೂ ಪ್ರದಾನ ಮಾಡಿದರು.

ಅಲ್ಲದೇ, ಸಿಎಬಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಚಾ ಅವರಿಗೆ ನಗದು ಬಹುಮಾನ, ಚಿನ್ನದ ಲೇಪಿತ ಬ್ಯಾಟ್ ಮತ್ತು ಚೆಂಡು ನೀಡಿ ಅಭಿನಂದಿಸಿದರು. ವಿಶ್ವಕಪ್‌ನಲ್ಲಿ ಎಂಟು ಇನ್ನಿಂಗ್ಸ್‌ಗಳಲ್ಲಿ ಆಡಿದ ರಿಚಾ ಘೋಷ್ 235 ರನ್ ಬಾರಿಸಿದ್ದು, 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ಸಮಪಡಿಸಿದ್ದಾರೆ.