ಕಾರವಾರ: ಬೆಲೇಕೇರಿ ಬಂದರಿನಿಂದ ನಡೆದ ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ಅವರು ಮತ್ತೆ ಜೈಲು ಪಾಲಾಗುವ ಸಾಧ್ಯತೆ ಎದುರಿಸುತ್ತಿದ್ದಾರೆ.

ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹಿಂದೆ ಶಿಕ್ಷೆಗೊಳಪಡಿಸಿತ್ತು. ನಂತರ ಆರೋಗ್ಯ ಸಮಸ್ಯೆ ಮತ್ತು ಚಿಕಿತ್ಸೆಯ ಕಾರಣ ನೀಡಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ನವೆಂಬರ್ 7 ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿತ್ತು.
ಆದರೆ, ಇದೀಗ ನ್ಯಾಯಾಲಯವು ಮಧ್ಯಂತರ ಜಾಮೀನು ರದ್ದುಗೊಳಿಸಿ ಹೊಸ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಸೈಲ್ ಅವರು ಹಿಂದಿನಿಂದಲೇ ಹೈಕೋರ್ಟ್‌ನಿಂದ ಶಿಕ್ಷೆಗೆ ತಡೆಯಾಜ್ಞೆ ಪಡೆದು ಜಾಮೀನಿನ ಮೇಲೆ ಹೊರಗಿದ್ದರು. ಈಗ ಜಾಮೀನು ರದ್ದಾಗಿರುವುದರಿಂದ ಮತ್ತೆ ಜೈಲುವಾಸ ತಪ್ಪಿಸಿಕೊಳ್ಳುವುದು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ.
ಇದಲ್ಲದೆ, ಸತೀಶ್ ಸೈಲ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ಎದುರಿಸುತ್ತಿದ್ದು, ಈ ಸಂಬಂಧ ಇಡಿ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಆ ಪ್ರಕರಣದಲ್ಲಿಯೂ ಅವರು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಹೈಕೋರ್ಟ್‌ನಿಂದ ಅಕ್ಟೋಬರ್ 25 ರವರೆಗೆ ಜಾಮೀನು ಪಡೆದಿದ್ದರು.


