Olympics 2028: 1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಪಂದ್ಯವೊಂದನ್ನು ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ನವೆಂಬರ್ 7 ರಂದು ದುಬೈನಲ್ಲಿ ನಡೆದ ತನ್ನ ಐಸಿಸಿ ಮಂಡಳಿ ಸಭೆಯಲ್ಲಿ, ಒಲಿಂಪಿಕ್ಸ್‌ನಲ್ಲಿ ತಲಾ 6 ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಅದರಂತೆ ಪುರುಷ ಮತ್ತು ಮಹಿಳಾ ವಿಭಾಗಗಳಿಂದ ತಲಾ ಆರು ತಂಡಗಳು ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿವೆ.
ಈ ಆರು ತಂಡಗಳನ್ನು ಟಿ20 ಟೀಮ್ ಶ್ರೇಯಾಂಕವನ್ನು ಆಧರಿಸಿ ಆಯ್ಕೆ ಮಾಡಲಿದೆ. ಆದರೆ ಇಲ್ಲಿ ಪ್ರಾದೇಶಿಕ ಅರ್ಹತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಅಂದರೆ ತಂಡಗಳ ಆಯ್ಕೆಗಾಗಿ ಏಷ್ಯಾ, ಓಷಿಯಾನಿಯಾ, ಯುರೋಪ್ ಮತ್ತು ಆಫ್ರಿಕಾ ಪ್ರಾದೇಶಿಕತೆಯನ್ನು ಪರಿಗಣಿಸಲಾಗುತ್ತಿದ್ದು, ಈ ಪ್ರದೇಶದ ತಂಡಗಳಲ್ಲಿ ಹೆಚ್ಚಿನ ಶ್ರೇಯಾಂಕ ಹೊಂದಿರುವ ಟೀಮ್ಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲಿದೆ.

