ಕುಂಭಮೇಳ ಖ್ಯಾತಿಯ ಮೊನಲಿಸಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ: ನಾಯಕ ಯಾರು?

ಸಾಮಾಜಿಕ ಜಾಲತಾಣದ ಶಕ್ತಿ ಎಷ್ಟು ಅಪಾರ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಒಮ್ಮೆ ವೈರಲ್‌ ಆದರೆ, ಯಾರ ಜೀವನವನ್ನೂ ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಈ ವೇದಿಕೆಯಲ್ಲಿದೆ. ಟೀ ಮಾರುತ್ತಿದ್ದವರು ಕೋಟ್ಯಧೀಶರಾದರು, ಲಾರಿ ಚಾಲಕರಾದವರು ಲಕ್ಷಾಧೀಶರಾದರು, ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದರು — ಹೀಗೆ ಸಾಮಾಜಿಕ ಜಾಲತಾಣದಿಂದ ಖ್ಯಾತಿ ಪಡೆದವರ ಕಥೆಗಳು ಅಸಂಖ್ಯಾತ. ಆ ಸಾಲಿನಲ್ಲಿ ಈಗ ‘ಕುಂಭಮೇಳ ಮೊನಲಿಸಾ’ ಎಂಬ ಹೆಸರು ಸೇರ್ಪಡೆಯಾಗಿದೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮತ್ತು ಹೂವು ಮಾರುತ್ತಿದ್ದ ಯುವತಿಯೊಬ್ಬಳ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಆಕೆ ಕ್ಷಣಾರ್ಧದಲ್ಲೇ ಸೆಲೆಬ್ರಿಟಿಯಾಗಿದ್ದರು. ಈಗ ಆ ಮೊನಲಿಸಾ ನೆರೆಯ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ.

ಮಧ್ಯಪ್ರದೇಶದ ಇಂಧೋರ್‌ನ ಮೂಲದ ಮೊನಲಿಸಾ ಭೋಸ್ಲೆ ಕುಂಭಮೇಳದ ವೇಳೆ ರುದ್ರಾಕ್ಷಿ ಮಾಲೆ ಮತ್ತು ಜಪಮಾಲೆ ಮಾರಾಟ ಮಾಡುತ್ತಿದ್ದರು. ಅಲ್ಲಿ ಹಾಜರಾಗಿದ್ದ ಫೋಟೋಗ್ರಾಫರ್ ಒಬ್ಬರು ಅವರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ತಕ್ಷಣ ಆ ಚಿತ್ರ ವೈರಲ್‌ ಆಯಿತು. ಅವರ ಸೌಂದರ್ಯ ಮತ್ತು ನೈಸರ್ಗಿಕ ಅಭಿವ್ಯಕ್ತಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿತು. ಆಗಿನಿಂದಲೇ ಆಕೆಗೆ “ಕುಂಭಮೇಳ ಮೊನಲಿಸಾ” ಎಂಬ ಹೆಸರು ಅಂಟಿಕೊಂಡಿತು. ಈಗ ಮೊನಲಿಸಾ ತೆಲುಗು ಚಿತ್ರರಂಗದಲ್ಲಿ ‘ಲೈಫ್’ ಎಂಬ ಸಿನಿಮಾದ ಮೂಲಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಚರಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಶ್ರೀನು ಕೋಟಪೇಟಿ ನಿರ್ದೇಶಿಸುತ್ತಿದ್ದು, ಅಂಜಯ್ಯ ಅವರು ವಂಗಮಾಂಬ ಕ್ರಿಯೇಶನ್ಸ್‌ ಬ್ಯಾನರ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ.

ಹೈದರಾಬಾದ್‌ನ ಪ್ರಸಾದ್ ಲ್ಯಾಬ್ಸ್‌ನಲ್ಲಿ ನಿನ್ನೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಿತು. ಮೊದಲ ಶಾಟ್‌ನಲ್ಲಿ ಮೊನಲಿಸಾ ಮತ್ತು ನಾಯಕ ಸಾಯಿ ಚರಣ್ ಅಭಿನಯಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮೊನಲಿಸಾ, “ಹೈದರಾಬಾದ್‌ಗೆ ಬಂದು ತೆಲುಗು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಸಂತೋಷ. ‘ಲೈಫ್’ ಸಿನಿಮಾ ಇಲ್ಲಿ ಭಾಗಿಯಾದ ಎಲ್ಲರ ಜೀವನಕ್ಕೂ ಹೊಸ ಲೈಫ್‌ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ. ನನಗೆ ಇನ್ನೂ ತೆಲುಗು ಬರುವುದಿಲ್ಲ, ಆದರೆ ಸಿನಿಮಾ ಮುಗಿಯುವ ವೇಳೆಗೆ ಖಂಡಿತಾ ಕಲಿಯುತ್ತೇನೆ,” ಎಂದಿದ್ದಾರೆ.

ವೈರಲ್‌ ಆಗಿದ ನಂತರ ಮೊನಲಿಸಾ ಈಗ ದೇಶದಾದ್ಯಂತ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮಕ್ಕೂ ಲಕ್ಷಾಂತರ ರೂ. ಸಂಭಾವನೆ ಪಡೆಯುತ್ತಿದ್ದಾರೆ. ತೆಲುಗು ಸಿನಿಮಾ ಮಾತ್ರವಲ್ಲದೆ, ಒಂದು ಹಿಂದಿ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಜೊತೆಗೆ ಫ್ಯಾಷನ್‌ ಶೋಗಳು ಮತ್ತು ಬ್ರ್ಯಾಂಡ್‌ ಪ್ರಚಾರಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.