ದಸರಾ ವೇಳೆ GST ಸಂಗ್ರಹದಲ್ಲಿ ಕರ್ನಾಟಕ ಟಾಪ್: ಗ್ಯಾರಂಟಿ ಯೋಜನೆ ಪರಿಣಾಮ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 6: ದಸರಾ ಹಬ್ಬದ ವೇಳೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು ದಾಖಲೆ ಸಾಧನೆ ಮಾಡಿದೆ. ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದ್ದು, ದಸರಾ ಶಾಪಿಂಗ್‌ ಸಂಭ್ರಮ ರಾಜ್ಯದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಿದೆ ಎಂಬುದನ್ನು ತೋರಿಸಿದೆ.

ಜಿಎಸ್‌ಟಿ ದರ ಕಡಿತದಿಂದ ಬೆಲೆ ಇಳಿಕೆಯಾಗಿದ್ದರಿಂದ ಜನರು ಉತ್ಸಾಹದಿಂದ ಖರೀದಿಗೆ ಮುಂದಾದರು. ಈ ವೃದ್ಧಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. “ಯೋಜನೆಗಳು ಖಜಾನೆಗೆ ಯಾವುದೇ ಹೆಚ್ಚುವರಿ ಭಾರ ತರದೆ, ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ ಬೇಡಿಕೆಯನ್ನು ಉತ್ತೇಜಿಸಿವೆ,” ಎಂದು ಸಿಎಂ ಹೇಳಿದ್ದಾರೆ.

ಅಕ್ಟೋಬರ್ ತಿಂಗಳ ಜಿಎಸ್‌ಟಿ ವರದಿಯ ಪ್ರಕಾರ (ಸೆಪ್ಟೆಂಬರ್ ವಹಿವಾಟಿನ ಆಧಾರದ ಮೇಲೆ), ರಾಜ್ಯವು ₹14,395 ಕೋಟಿ ಸಂಗ್ರಹಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ₹13,080 ಕೋಟಿ ರೂಪಾಯಿಗಳು ಸಂಗ್ರಹವಾಗಿತ್ತು. ಕೇಂದ್ರದ ಜಿಎಸ್‌ಟಿ, ಐಜಿಎಸ್‌ಟಿ ಮತ್ತು ಸೆಸ್‌ಗಳನ್ನು ಕಡಿತಗೊಳಿಸಿದ ನಂತರ ರಾಜ್ಯದ ಖಜಾನೆಗೆ ₹7,065 ಕೋಟಿ ಸಿಗಲಿದೆ. ಟಾಪ್‌ 5 ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮಹಾರಾಷ್ಟ್ರದಲ್ಲಿ ಶೇ.3ರಷ್ಟು ಹೆಚ್ಚಳದೊಂದಿಗೆ ₹32,025 ಕೋಟಿ, ಗುಜರಾತ್‌ನಲ್ಲಿ ಶೇ.6ರಷ್ಟು ವೃದ್ಧಿಯೊಂದಿಗೆ ₹12,113 ಕೋಟಿ, ತಮಿಳುನಾಡಿನಲ್ಲಿ ಶೇ.4ರಷ್ಟು ಏರಿಕೆಯಿಂದ ₹11,588 ಕೋಟಿ ಮತ್ತು ಉತ್ತರ ಪ್ರದೇಶದಲ್ಲಿ ಶೇ.2ರಷ್ಟು ಏರಿಕೆಯೊಂದಿಗೆ ₹9,806 ಕೋಟಿ ಸಂಗ್ರಹವಾಗಿದೆ. ತೆಲಂಗಾಣವೂ ಶೇ.10ರಷ್ಟು ವೃದ್ಧಿ ಸಾಧಿಸಿದರೂ ಅದರ ಮೊತ್ತ ₹5,726 ಕೋಟಿಯಾಗಿರುವುದರಿಂದ ಟಾಪ್‌ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ರಾಷ್ಟ್ರ ಮಟ್ಟದಲ್ಲಿ ಕೇವಲ ಶೇ.2ರಷ್ಟು ವೃದ್ಧಿ ಕಂಡಿದ್ದರೂ ಕರ್ನಾಟಕದ ಸಾಧನೆ ಅತ್ಯುತ್ತಮವಾಗಿದೆ. ಮುಂದಿನ ತಿಂಗಳ ವರದಿಯಲ್ಲೂ ತೆರಿಗೆ ಆದಾಯದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದ್ದು, ದೀಪಾವಳಿ ಹಬ್ಬದ ಖರೀದಿ ಚಟುವಟಿಕೆಗಳ ಪ್ರಭಾವ ಅದರಲ್ಲಿರಲಿದೆ. ವಾಹನ, ಉಡುಪು ಮತ್ತು ಎಲೆಕ್ಟ್ರಾನಿಕ್ಸ್‌ ವಲಯಗಳಲ್ಲಿ ಶೇ.40ರಷ್ಟು ವೃದ್ಧಿ ದಾಖಲಾಗಿರುವುದಾಗಿ ವರದಿ ತಿಳಿಸಿದೆ.