ಕಾರು-ಆಟೋ ನಡುವೆ ಭೀಕರ ಅಪಘಾತ – ನಾಲ್ಕು ವರ್ಷದ ಮಗು ದಾರುಣ ಸಾ**

ಮಂಗಳೂರು/ಬೆಂಗಳೂರು, ನವೆಂಬರ್ 2: ಕಾರು ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ಕೂವರೆ ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪರ್ಪುಂಜ ಕೊಯಿಲತ್ತಡ್ಕದಲ್ಲಿ ನಡೆದಿದೆ. ಅಪಘಾತದಲ್ಲಿ ಆಟೋ ಚಾಲಕ ಸೇರಿ ಐವರು ಗಾಯಗೊಂಡಿದ್ದು, ಬಸ್ ಓವರ್‌ಟೇಕ್ ಮಾಡಲು ಪ್ರಯತ್ನಿಸಿದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ.

ಮಾಹಿತಿಯ ಪ್ರಕಾರ, ಸುಳ್ಯದಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು, ಬಸ್ ಓವರ್‌ಟೇಕ್ ಮಾಡುವ ವೇಳೆ ಪುತ್ತೂರಿನಿಂದ ತಿಂಗಳಾಡಿ ಕಡೆಗೆ ತೆರಳುತ್ತಿದ್ದ ಆಟೋಗೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಚಾಲಕ ಹನೀಫ್ ಬನ್ನೂರು ಅವರ ಮಗಳು ಶಜ್ವಾ ಫಾತಿಮಾ (4) ಸಾವನ್ನಪ್ಪಿದ್ದಾಳೆ. ಹನೀಫ್, ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಅತ್ತೆಗೆ ಗಾಯಗಳಾಗಿದ್ದು, ಇವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.