ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಜೋರಾಗಿ ಅಲೆಮಾಲೆಯಾಯ್ತು. ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಆಚರಣೆಗೆ ಜಿಟಿಜಿಟಿ ಮಳೆಯೂ ಅಡ್ಡಿಯಾಗಲಿಲ್ಲ. ಸಾವಿರಾರು ಕನ್ನಡಾಭಿಮಾನಿಗಳು ಮಳೆಯಲ್ಲೇ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ಸಿಡಿಮದ್ದು ಸಿಡಿಸಿ ಬಾನಲ್ಲಿ ಕನ್ನಡಮ್ಮನ ಚಿತ್ತಾರ ಮೂಡಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ವತಿಯಿಂದ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಮಧ್ಯರಾತ್ರಿಯ ಬಣ್ಣಬಣ್ಣದ ಬೆಳಕಿನ ಚಿತ್ತಾರ ಕನ್ನಡಿಗರ ಮನಸೆಳೆಯಿತು. ವರ್ಷದಿಂದ ವರ್ಷಕ್ಕೆ ಬೆಳಗಾವಿಯಲ್ಲಿ ಕನ್ನಡ ಹಬ್ಬದ ಜೋಷ್ ಹೆಚ್ಚಾಗುತ್ತಿದ್ದು, ಕನ್ನಡ ಧ್ವಜಗಳ ಹಾರಾಟ ಮತ್ತು ಡಿಜೆ ನೃತ್ಯಗಳಿಂದ ನಗರ ಕೆಂಪು-ಹಳದಿಯಾಗಿ ಮಿನುಗಿತು. ಯಾವುದೇ ಅಹಿತಕರ ಘಟನೆಗಳು ಆಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

