ಬೆಂಗಳೂರು, ಅಕ್ಟೋಬರ್ 31: ನೆರೆ ರಾಜ್ಯಗಳಲ್ಲಿ ಮೊಂತಾ ಚಂಡಮಾರುತದ ಪರಿಣಾಮವಾಗಿ ಉಂಟಾದ ಭಾರೀ ಮಳೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುವಂತೆ ಮಾಡಿದೆ. ಇದರ ಪರಿಣಾಮವಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ತರಕಾರಿ ದರಗಳು ಏರಿಕೆಯಾಗುತ್ತಿದ್ದಂತೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದ್ದಾರೆ. ಖರೀದಿದಾರರ ಕೊರತೆಯಿಂದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚಂಡಮಾರುತದ ಎಫೆಕ್ಟ್‌ನಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯಿಂದ ತರಕಾರಿ ಬೆಳೆಗಳು ಹಾನಿಗೊಳಗಾಗಿ, ಸರಿಯಾದ ಪೂರೈಕೆ ಸಾಧ್ಯವಾಗಿಲ್ಲ. ಬೆಳೆ ಕೈಗೆ ಬಾರದ ಪರಿಣಾಮ ತರಕಾರಿಗಳ ಬೆಲೆಗಳು ಆಕಾಶ ಮುಟ್ಟಿವೆ.
ಬೆಲೆ ಕೇಳಿದಷ್ಟೇ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಅನೇಕ ಗೃಹಿಣಿಯರು ತರಕಾರಿ ಖರೀದಿಗೆ ಹಿಂದೇಟು ಹಾಕಿ, ಒಂದು ಕಿಲೋ ಬದಲು ಅರ್ಧ ಅಥವಾ ಕಾಲು ಕಿಲೋ ತರಕಾರಿ ಮಾತ್ರ ಖರೀದಿಸಲು ಮುಂದಾಗುತ್ತಿದ್ದಾರೆ. “ಈ ರೀತಿ ಬೆಲೆ ಏರಿಕೆಯಲ್ಲಿ ಅಡುಗೆ ಮಾಡುವುದು ಕಷ್ಟವಾಗಿದೆ,” ಎಂದು ಹಲವರು ವಿಷಾದ ವ್ಯಕ್ತಪಡಿಸಿದ್ದಾರೆ.
