ಚಿಕಾಗೋ, ಅ.29: ಚಿಕಾಗೋದಿಂದ ಜರ್ಮನಿಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ಭಾರತೀಯ ಪ್ರಣೀತ್ ಕುಮಾರ್ ಉಸಿರಿಪಲ್ಲಿ ಎಂಬಾತ ಫೋರ್ಕ್‌ನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ, ಯುವತಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಹಿತಿಯ ಪ್ರಕಾರ, ಪ್ರಣೀತ್ ಮೊದಲಿಗೆ 17 ವರ್ಷದ ಪ್ರಯಾಣಿಕನ ಭುಜಕ್ಕೆ ಫೋರ್ಕ್‌ನಿಂದ ಇರಿದಿದ್ದಾನೆ. ನಂತರ ಮತ್ತೊಬ್ಬ ಬಾಲಕನ ತಲೆಯ ಹಿಂಭಾಗಕ್ಕೂ ಇರಿದಿದ್ದಾನೆ ಎನ್ನಲಾಗಿದೆ. ಮಧ್ಯದ ಸೀಟಿನಲ್ಲಿ ಮಲಗಿದ್ದ ಪ್ರಯಾಣಿಕ ಎಚ್ಚರವಾದಾಗ, ಪ್ರಣೀತ್ ಆತನ ಮೈಮೇಲೆ ಹತ್ತಿ ಹಲ್ಲೆಗೆ ಮುಂದಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ.
ಘಟನೆಯ ವೇಳೆ ವಿಮಾನ ಸಿಬ್ಬಂದಿ ತಡೆಯಲು ಮುಂದಾದಾಗ, ಪ್ರಣೀತ್ ಆಟಿಕೆ ಪಿಸ್ತೂಲ್ ತೆಗೆದು ಬಾಯಿಗೆ ಇಟ್ಟು ಟ್ರಿಗರ್ ಎಳೆದಿದ್ದಾನೆ. ಬಳಿಕ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿ, ಸಿಬ್ಬಂದಿಗೂ ಹೊಡೆದಿದ್ದಾನೆ ಎಂದು ವರದಿಯಾಗಿದೆ.



