ಕೇರಳ, ಅಕ್ಟೋಬರ್ 15: ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಕೇರಳದ ಕೂತ್ತಟ್ಟುಕುಲಂ ಪ್ರದೇಶದಲ್ಲಿ ವಾಕಿಂಗ್ ಹೋಗುತ್ತಿದ್ದ ವೇಳೆ ರೈಲಾ ಒಡಿಂಗಾ ಅಕಸ್ಮಾತ್ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 80 ವರ್ಷದ ಒಡಿಂಗಾ ಅವರು ಆರು ದಿನಗಳ ಹಿಂದೆ ಆಯುರ್ವೇದ ಚಿಕಿತ್ಸೆಗಾಗಿ ಕೇರಳದ ಕೂತ್ತಟ್ಟುಕುಲಂಗೆ ಬಂದಿದ್ದರು. ಅವರ ಜೊತೆ ಮಗಳು ಹಾಗೂ ಆಪ್ತ ಕುಟುಂಬ ಸದಸ್ಯರೂ ಇದ್ದರು.

ಪ್ರಸ್ತುತ ಅವರ ಮೃತದೇಹವನ್ನು ಕೂತ್ತಟ್ಟುಕುಲಂನ ದೇವ ಮಾತಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಮತ್ತು ಕೀನ್ಯಾಕ್ಕೆ ಕಳುಹಿಸುವ ಸಂಬಂಧ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ. ಕೀನ್ಯಾದ ರಾಜಕೀಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರಭಾವ ಬೀರಿದ ರೈಲಾ ಒಡಿಂಗಾ ಅವರು 2008 ರಿಂದ 2013 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರದ ಸಾಮರಸ್ಯ ಮತ್ತು ಸಂವಿಧಾನ ಸುಧಾರಣೆಗೆ ಬದ್ಧನಾದ ನಾಯಕನಾಗಿ ಅವರು ಹೆಸರು ಮಾಡಿದ್ದಾರೆ.
ಆಧುನಿಕ ಕೀನ್ಯಾದ ಪ್ರಜಾಪ್ರಭುತ್ವದ ಶಿಲ್ಪಿ ಎಂದೇ ಪರಿಗಣಿಸಲ್ಪಟ್ಟ ಒಡಿಂಗಾ ಅವರು ದೀರ್ಘಕಾಲ ವಿರೋಧ ಪಕ್ಷದ ನಾಯಕ ಹಾಗೂ ಆರೆಂಜ್ ಡೆಮಾಕ್ರಟಿಕ್ ಮೂವ್‌ಮೆಂಟ್ ಪಕ್ಷದ ಮುಖ್ಯಸ್ಥರಾಗಿದ್ದರು. ಅನೇಕ ಹೋರಾಟಗಳು ಹಾಗೂ ಜನಪರ ಚಟುವಟಿಕೆಗಳ ಮೂಲಕ ತಮ್ಮದೇ ಆದ ರಾಜಕೀಯ ಗುರುತು ನಿರ್ಮಿಸಿಕೊಂಡಿದ್ದರು. ಕೇರಳದಿಂದ ಅವರ ಮೃತದೇಹವನ್ನು ಕೀನ್ಯಾಕ್ಕೆ ಕಳುಹಿಸಲು ನವದೆಹಲಿಯಲ್ಲಿರುವ ಕೀನ್ಯಾ ರಾಯಭಾರ ಕಚೇರಿ ಅಧಿಕಾರಿಗಳು ಕೇರಳ ಸರ್ಕಾರ ಹಾಗೂ ಆಸ್ಪತ್ರೆ ನಿರ್ವಹಣೆಯೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.

