ಬೆಂಗಳೂರು, ಅಕ್ಟೋಬರ್ 14: ಕಿರುತೆರೆ ನಟ–ನಟಿಯರಿಗೆ ಸೈಟ್ ಕೊಡಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ಭಾರೀ ವಂಚನೆ ನಡೆದಿದೆ. ನಕಲಿ ಲೇಔಟ್ ಪ್ಲಾನ್ ಹಾಗೂ ದಾಖಲೆಗಳನ್ನು ಸೃಷ್ಟಿಸಿ, ಸೈಟ್ ಕೊಡಿಸುವ ನೆಪದಲ್ಲಿ ಹಣ ಸಂಗ್ರಹಿಸಿ ಕಲಾವಿದರನ್ನು ಮೋಸಗೊಳಿಸಿರುವ ಆರೋಪ ಎದುರಾಗಿದೆ. ಈ ಪ್ರಕರಣದಲ್ಲಿ ಬಿಲ್ಡರ್ ಭಗೀರಥ ಮತ್ತು ಸಂಜೀವ್ ತಗಡೂರು ಸೇರಿದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಒಂದೆರಡು ಜನರಷ್ಟೇ ಅಲ್ಲ — ಬರೋಬ್ಬರಿ 139 ಕಿರುತೆರೆ ಕಲಾವಿದರು ಈ ಮೋಸದ ಬಲಿಯಾಗಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯೆ ಭಾವನಾ ಬೆಳಗೆರೆ ಅವರೂ ಸಹ ವಂಚನೆಯೊಳಗೆ ಸಿಲುಕಿದ್ದು, ಅವರ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳಾದ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಮತ್ತು ಉಮಾಕಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, 2015ರಲ್ಲಿ ಸಂಜೀವ್ ತಗಡೂರು ಕೆಟಿವಿಎ ಸೈಟ್ ಸಮಿತಿಯ ಸದಸ್ಯರಾಗಿದ್ದು, ಬಿಲ್ಡರ್ ಜೊತೆಗೂಡಿ ತಾವರೆಕೆರೆ ಬಳಿ ಸೈಟ್ ಕೊಡಿಸುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದರು. ಬಳಿಕ ಶುದ್ದ ದಾಖಲೆಗಳ ಬದಲು ನಕಲಿ ದಾಖಲೆಗಳನ್ನು ತಯಾರಿಸಿ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಒಟ್ಟು 1.6 ಕೋಟಿ ರೂಪಾಯಿಗಳ ವಂಚನೆ ನಡೆದಿದ್ದು, ಭಾವನಾ ಬೆಳಗೆರೆ, ಶರತ್ ಚಂದ್ರ, ರಾಹುಲ್ ಸೇರಿದಂತೆ ಅನೇಕ ಕಲಾವಿದರು ಈ ಮೋಸದ ಬಲಿಯಾಗಿದ್ದಾರೆ. ಪ್ರಸ್ತುತ ಆರ್.ಆರ್.ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
