ಬೆಂಗಳೂರು: ದೀಪಾವಳಿ ಹಬ್ಬದ ಸಿದ್ಧತೆಗಳು ಆರಂಭವಾಗುತ್ತಿದ್ದಂತೆಯೇ ಪಟಾಕಿ ದುರಂತ ತಡೆಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸೋಮವಾರ (ಅ.7) ಅಗ್ನಿಶಾಮಕ ಸಿಬ್ಬಂದಿ ಮತ್ತು ಪಟಾಕಿ ಮಾರಾಟಗಾರರೊಂದಿಗೆ ನಡೆದ ಸಭೆಯಲ್ಲಿ ಆಯುಕ್ತರು ಕಳೆದ ಬಾರಿ ಅತ್ತಿಬೆಲೆ ಮತ್ತು ಮಾರ್ಕೆಟ್ ಪ್ರದೇಶಗಳಲ್ಲಿ ನಡೆದ ದುರಂತಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಪಟಾಕಿ ಮಾರಾಟಗಾರರಿಗೆ ಮುಂಚಿತವಾಗಿ ಪಟಾಕಿ ಸಂಗ್ರಹಣೆ ಮಾಡಲು ಅನುಮತಿ ಇಲ್ಲ. ಬೇಡಿಕೆ ಹೆಚ್ಚಿದೆ ಎಂಬ ನೆಪದಲ್ಲಿ ಅತಿಯಾಗಿ ಪಟಾಕಿ ಸಂಗ್ರಹಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ 5 ದಿನ ಮುಂಚಿತವಾಗಿ ಮಾತ್ರ ಪಟಾಕಿ ತರಲು ಹಾಗೂ ಐದು ದಿನಗಳ ಒಳಗಾಗಿ ಸ್ಟಾಕ್ ಖಾಲಿ ಮಾಡಲು ಸೂಚಿಸಲಾಗಿದೆ. ಸೆ.18ರಿಂದ 22ರವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅನುಮತಿ ದೊರೆಯಲಿದೆ.
ಅದೇ ವೇಳೆ, ಅನಧಿಕೃತ ಪಟಾಕಿ ಸಂಗ್ರಹಣೆ ಕುರಿತು ಬೀಟ್ ಪೊಲೀಸರು ಪರಿಶೀಲನೆ ನಡೆಸಲಿದ್ದು, ನಿಯಮ ಉಲ್ಲಂಘನೆಯಾಗಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
