ದರ್ಶನ್‌ ಸರ್‌ನ್ನು ಈ ಸ್ಥಿತಿಯಲ್ಲಿ ನೋಡಲು ತುಂಬ ಕಷ್ಟ: ಅಳಿಯ ಮನೋಜ್ ಭಾವುಕ

ದರ್ಶನ್‌ ಸೋದರಳಿಯ ಮನೋಜ್‌ ‘ಟಕ್ಕರ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಧರಣಿ ಸಿನಿಮಾದಲ್ಲಿ ನಟಿಸಿದ ಮನೋಜ್, ಇದೀಗ ತಮ್ಮ ಮೂರನೇ ಚಿತ್ರ ಗಾರ್ಡನ್‌ನಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಆರ್ಯ ಮಹೇಶ್ ನಿರ್ದೇಶನದ ಈ ಚಿತ್ರದ ಮುಹೂರ್ತದಲ್ಲಿ, ಮೊದಲ ದೃಶ್ಯಕ್ಕೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಕ್ಲ್ಯಾಪ್ ನೀಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸಂಬಂಧಿಸಿದ ಪ್ರಕರಣದ ಕುರಿತು ಮನೋಜ್ ಭಾವುಕರಾದರು.

“ವಿಷಕೊಡಿ ಅಂತ ದರ್ಶನ್ ಸರ್‌ನ್ನು ನ್ಯಾಯಾಲಯದ ಮುಂದೆ ಕೇಳಿದ ವಿಚಾರ ತುಂಬಾ ಬೇಸರ ಆಯ್ತು. ಅಲ್ಲಿ ಏನು ನಡೆಯುತ್ತಿದೆ ಅನ್ನೋದು ನಮಗೆ ಗೊತ್ತಾಗ್ತಿಲ್ಲ. ಆ ಘಟನೆ ನೆನಪಾದ್ರೆ ಕಣ್ಣೀರು ಬರುತ್ತದೆ. ದರ್ಶನ್ ಸರ್‌ ಹೆಸರನ್ನೇ ಪ್ರಸ್ತಾಪಿಸಿದರೆ ಭಾವುಕರಾಗಿಬಿಡ್ತೀನಿ,” ಎಂದು ಮನೋಜ್ ಹೇಳಿದ್ದಾರೆ.

ಇಂಡಸ್ಟ್ರಿಗೆ ಬರಲು ದರ್ಶನ್ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ ಮನೋಜ್, “ಮನೆಗೆ ಹೋದಾಗ ಯಾವಾಗಲೂ ಸಿನಿಮಾ ಕುರಿತೇ ಮಾತಾಡ್ತಿದ್ದೇವೆ. ದರ್ಶನ್ ಸರ್ ನಮಗೆಲ್ಲಾ ದೊಡ್ಡ ಪ್ರೇರಣೆ. ಈ ಘಟನೆ ಆದ್ಮೇಲೆ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಎಲ್ಲವೂ ಶೀಘ್ರದಲ್ಲೇ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ,” ಎಂದು ಭಾವುಕರಾಗಿ ತಿಳಿಸಿದ್ದಾರೆ.