ಶಿಲ್ಪಾ ಶೆಟ್ಟಿಗೆ ಪೊಲೀಸರ ನೋಟಿಸ್‌ – ವಿಚಾರಣೆಗೆ ಹಾಜರಾಗಲು ಸೂಚನೆ

ಉದ್ಯಮಿ ರಾಜ್ ಕುಂದ್ರಾ ಒಂದರ ಹಿಂದೆ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ಬೆಟ್ಟಿಂಗ್‌ ಪ್ರಕರಣ, ವಂಚನೆ ಪ್ರಕರಣ, ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದ ಬಳಿಕ ಇದೀಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾ ವಿರುದ್ಧ ದಾಖಲಾಗಿದೆ.

ಈ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಹೆಸರೂ ಕೇಳಿಬಂದಿದ್ದು, ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಶಿಲ್ಪಾ ಶೆಟ್ಟಿಗೆ ನೋಟಿಸ್‌ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಅವರ ಕಂಪನಿಯ ಖರ್ಚು ವೆಚ್ಚ, ಜಾಹೀರಾತು ಖರ್ಚು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪೊಲೀಸರು ಪ್ರಶ್ನಿಸಲು ಸಿದ್ಧರಾಗಿದ್ದಾರೆ. ಪೊಲೀಸರ ತನಿಖೆಯಲ್ಲಿ, 60 ಕೋಟಿಯಲ್ಲಿ 15 ಕೋಟಿ ರೂಪಾಯಿಯನ್ನು ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಯ ಮಾಲೀಕತ್ವದ ಕಂಪನಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಆ ಹಣವನ್ನು ಕಂಪನಿಯ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜ್ ಕುಂದ್ರಾವನ್ನು ಈಗಾಗಲೇ ಒಮ್ಮೆ ವಿಚಾರಣೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅವರು ನಟಿಯರಾದ ನೇಹಾ ದೂಪಿಯಾ, ಬಿಪಾಶಾ ಬಸು ಸೇರಿದಂತೆ ಇನ್ನಿತರರಿಗೆ ತಮ್ಮ ಖಾತೆಯಿಂದ ಹಣ ವರ್ಗಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. ರಾಜ್ ಕುಂದ್ರಾ–ಶಿಲ್ಪಾ ಶೆಟ್ಟಿ ದಂಪತಿಗೆ ಪೊಲೀಸರ ನೋಟಿಸ್‌ ಹೊಸದೇನಲ್ಲ. ರಾಜಸ್ಥಾನ ರಾಯಲ್ಸ್ ತಂಡದ ಸಹಮಾಲೀಕರಾಗಿದ್ದಾಗ ಬೆಟ್ಟಿಂಗ್‌ ಪ್ರಕರಣದಲ್ಲಿ ಹೆಸರು ಕೇಳಿಬಂದಿತ್ತು. ನಂತರ ಚಿನ್ನದ ಮಳಿಗೆ ಹೆಸರಲ್ಲಿ ವಂಚನೆ, ಸಾಲ ಪಡೆದು ವಂಚನೆ, ನೀಲಿ ಚಿತ್ರ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಜೈಲು ಸೇರಿದ್ದರು. ಈಗ ಮತ್ತೆ 60 ಕೋಟಿ ರೂಪಾಯಿ ವಂಚನೆ ಪ್ರಕರಣ ಇವರನ್ನು ಕಾಡುತ್ತಿದೆ.