ಕನ್ನಡ ಸಾಹಿತ್ಯದ ಮೇರು ಸಾಹಿತಿ ಎಸ್‌ಎಲ್‌ ಭೈರಪ್ಪ ಇನ್ನಿಲ್ಲ

ಬೆಂಗಳೂರು: ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ಎಲ್‌ ಭೈರಪ್ಪ (94) ಹೃದಯಾಘಾತದಿಂದ ನಿಧನರಾದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 2:30ಕ್ಕೆ ಕೊನೆಯುಸಿರೆಳೆದರು. ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕನ್ನಡದಲ್ಲಿ ಅನೇಕ ಕೃತಿಗಳನ್ನು ಬರೆದ ಇವರ ಕಾದಂಬರಿಗಳು ಇಂಗ್ಲಿಷ್ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ಗಳಿಸಿದ್ದವು. ಭಾರತ ಸರ್ಕಾರವು 2023ರಲ್ಲಿ ಭೈರಪ್ಪ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿತ್ತು.

1931ರ ಆಗಸ್ಟ್‌ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಜನಿಸಿದ ಭೈರಪ್ಪ, ಮೈಸೂರಿನಲ್ಲಿ ಶಿಕ್ಷಣ ಪಡೆದು ಎಂ.ಎ.ಯಲ್ಲಿ ಸುವರ್ಣ ಪದಕ ಗಳಿಸಿದ್ದರು. ನಂತರ ಬರೋಡಾ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ “ಸತ್ಯ ಮತ್ತು ಸೌಂದರ್ಯ” ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದರು. ಗೃಹಭಂಗ, ವಂಶವೃಕ್ಷ, ಸಾಕ್ಷಿ, ಪರ್ವ, ಭಿತ್ತಿ, ನಾಯಿ ನೆರಳು, ದಾಟು ಮುಂತಾದ ಹಲವಾರು ಕಾದಂಬರಿಗಳು ದೇಶದಾದ್ಯಂತ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.