ಹೈಕೋರ್ಟ್‌ನಲ್ಲಿ ಸೆ.22ಕ್ಕೆ ಬೈಕ್ ಟ್ಯಾಕ್ಸಿ ವಿಚಾರಣೆ – ಚಾಲಕರಿಗೆ ಸಿಹಿ ಸುದ್ದಿ ಸಿಗುತ್ತಾ?

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಇಲಾಖೆ ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಜಟಾಪಟಿ ಮುಂದುವರೆದಿದ್ದು, ಸೆಪ್ಟೆಂಬರ್ 22ರಂದು ಬೈಕ್ ಟ್ಯಾಕ್ಸಿ ಭವಿಷ್ಯ ಸ್ಪಷ್ಟವಾಗಲಿದೆ. ಬೈಕ್ ಟ್ಯಾಕ್ಸಿ ಸೇವೆಯ ಕಾರ್ಯಾಚರಣೆ ಕುರಿತು ಸರ್ಕಾರ ತನ್ನ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.

ಇದಕ್ಕಾಗಿ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಸಾರಿಗೆ ಇಲಾಖೆಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಒಟ್ಟು 11 ಸದಸ್ಯರ ಸಮಿತಿಯಲ್ಲಿ ಡಲ್ಟ್ ಆಯುಕ್ತರು, ಕಾರ್ಮಿಕ ಇಲಾಖೆ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಬಿಎಂಟಿಸಿ ಎಂಡಿ, ಬೆಂಗಳೂರು ಜಂಟಿ ಸಂಚಾರ ಮತ್ತು ನಗರ ಜಂಟಿ ಪೊಲೀಸ್ ಆಯುಕ್ತರು, ಬಿಎಂಆರ್‌ಸಿಎಲ್ ಪ್ರತಿನಿಧಿ, ಬಿಬಿಎಂಪಿ ಪ್ರತಿನಿಧಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಹಲವರು ಸೇರಿದ್ದಾರೆ.

ಸಮಿತಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಸಾಧಕ–ಭಾದಕಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿ ಆಧಾರದ ಮೇಲೆ ಸರ್ಕಾರ ಬೈಕ್ ಟ್ಯಾಕ್ಸಿ ಕುರಿತ ನಿಯಮಗಳನ್ನು ರೂಪಿಸಿ ತನ್ನ ನಿಲುವು ಪ್ರಕಟಿಸಲಿದೆ. ಪ್ರಸ್ತುತ ಅಂದಾಜು ಪ್ರಕಾರ, ಬೆಂಗಳೂರಿನಲ್ಲಿ ಮಾತ್ರವೇ ಸುಮಾರು 1.20 ಲಕ್ಷ ಖಾಸಗಿ ಬೈಕ್ ಸವಾರರು ಬೈಕ್ ಟ್ಯಾಕ್ಸಿ ಸೇವೆಯಲ್ಲಿ ತೊಡಗಿದ್ದಾರೆ.