ನವದೆಹಲಿ, ಸೆಪ್ಟೆಂಬರ್ 1: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 2,500 ಮಂದಿ ಗಾಯಗೊಂಡಿದ್ದಾರೆ. ನುರ್ಗಲ್, ಚಾವ್ಕೇ ಮತ್ತು ವಟಪುರ ಪ್ರದೇಶಗಳು ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಅಫ್ಘಾನ್ ಜನತೆಗೆ ಭಾರತ ಬೆಂಬಲ ನೀಡುವುದಾಗಿ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿ ದುಃಖಕರ. ಈ ಸಂಕಷ್ಟದ ವೇಳೆಯಲ್ಲಿ ಮೃತರ ಕುಟುಂಬಗಳಿಗೆ ನಮ್ಮ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಭಾರತವು ಪೀಡಿತರಿಗೆ ಅಗತ್ಯವಿರುವ ಮಾನವೀಯ ನೆರವು ನೀಡಲು ಸಿದ್ಧವಾಗಿದೆ” ಎಂದು ಬರೆದಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ಪ್ರತಿಕ್ರಿಯೆ ನೀಡಿದ್ದು, “ಅಫ್ಘಾನ್ ಜನರಿಗೆ ಈ ಅಗತ್ಯದ ಸಮಯದಲ್ಲಿ ಭಾರತ ನೆರವು ನೀಡಲಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು, ಗಾಯಾಳುಗಳ ಚೇತರಿಕೆಗೆ ನಮ್ಮ ಪ್ರಾರ್ಥನೆಗಳು” ಎಂದು ತಿಳಿಸಿದ್ದಾರೆ.
