ಹೊನ್ನಾವರ ಅ. 21: ಕರ್ನಾಟಕ ಸರ್ಕಾರದ ಆದೇಶದಂತೆ ಸ್ವರ ಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟಿಗೆ ಖ್ಯಾತ ಹಿಂದೂಸ್ಥಾನಿ ಗಾಯಕ ಅಶೋಕ ಹುಗ್ಗಣ್ಣವರ್ ಅವರನ್ನು ನಾಮಕರಣಗೊಳಿಸಲಾಗಿದೆ. ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ಕೈವಲ್ಯ ಕುಮಾರ ಗುರವ ಇವರು ಟ್ರಸ್ಟಿನ ಅಧ್ಯಕ್ಷರಾಗಿದ್ದಾರೆ.

ಅಶೋಕ ಹುಗ್ಗಣ್ಣ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಬಹುಕಾಲ ಕೆಲಸ ಮಾಡಿದ್ದು ಜಿಲ್ಲೆಯಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಹಲವಾರು ಪ್ರಸಿದ್ಧ ಶಿಷ್ಯರನ್ನು ತರಬೇತಿಗೊಳಿಸಿದ್ದಾರೆ. ಸಂಗೀತದಲ್ಲಿ ಎಂಎ ಸಂಗೀತ ರತ್ನ ಮತ್ತು ಸಸ್ಯ ಶಾಸ್ತ್ರದಲ್ಲಿ ಎಂಎಸ್‌ಸಿ ಪದವಿದರರಾದ ಹುಗ್ಗಣ್ಣ ಅವರು ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಕುಟುಂಬರಾದ ಯರಗುಪ್ಪಿ ಕುಟುಂಬದಿಂದ ಬಂದವರು.
ರಾಜಗುರು ಅವರ ಶಿಷ್ಯರಾಗಿ ಸಂಗಮೇಶ ಗುರವ ಬಳಿ ಅಧ್ಯಯನ ಮಾಡಿದ ಹುಗ್ಗಣ್ಣವರು ಪಿಎಚ್‌ಡಿ ಪದವಿದರರು. ಆಕಾಶವಾಣಿ, ದೂರದರ್ಶನ ಕಲಾವಿದರು. ದೇಶದ ಪ್ರತಿಷ್ಠೆ ವೇದಿಕೆಯಲ್ಲಿ ಹಾಡಿದವರಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಹಂಪಿ ವಿವಿ ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಇವರು ನಿವೃತ್ತಿಯ ನಂತರ ಧಾರವಾಡದಲ್ಲಿ ನೆಲೆಸಿದ್ದಾರೆ. ಇವರಿಂದ ರಾಜಗುರು ಟ್ರಸ್ಟ್ ಹೆಚ್ಚಿನ ಸೇವೆ ಪಡೆದು ಸಂಗೀತ ಕ್ಷೇತ್ರ ಬೆಳೆಸುವಲ್ಲಿ ಹುಗ್ಗಣ್ಣ ಪ್ರಸಿದ್ಧರಾಗಲಿ ಎಂದು ಅಭಿಮಾನಿಗಳು ಕೋರಿದ್ದಾರೆ.



