ಟೀಚರ್ ಹೊಡೆದಿದ್ದಕ್ಕೆ ಪ್ರತೀಕಾರವಾಗಿ ವಿದ್ಯಾರ್ಥಿ ಗುಂಡು ಹಾರಿಸಿದ ಘಟನೆ

ರುದ್ರಪುರ, ಆಗಸ್ಟ್ 21: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ತೀರಾ ಸೂಕ್ಷ್ಮವಾಗುತ್ತಿದೆ. ಪೋಷಕರಾಗಲಿ ಶಿಕ್ಷಕರಾಗಲಿ ತರಾಟೆಗೆ ತೆಗೆದುಕೊಂಡರೆ ಅಥವಾ ಬೈದರೆ ಸಹಿಸಿಕೊಳ್ಳದೆ, ತೀವ್ರ ನಿರ್ಧಾರಕ್ಕೆ ಹೋಗುವ ಸಂದರ್ಭಗಳು ಹೆಚ್ಚಾಗಿವೆ. ಅದಕ್ಕೆ ಸಾಕ್ಷಿಯಂತೆ ರುದ್ರಪುರದಲ್ಲಿ ನಡೆದ ಘಟನೆ ಒಂದು.

ಟೀಚರ್ ಹೊಡೆದಿದ್ದಕ್ಕೆ ಬೇಸರಗೊಂಡ 9ನೇ ತರಗತಿ ವಿದ್ಯಾರ್ಥಿಯೊಬ್ಬ, ಎರಡು ದಿನದ ಬಳಿಕ ದೇಶೀಯ ಪಿಸ್ತೂಲ್‌ನ್ನು ಶಾಲೆಗೆ ಕರೆದುಕೊಂಡು ಬಂದು ಭೌತಶಾಸ್ತ್ರ ಶಿಕ್ಷಕರಿಗೆ ಗುಂಡು ಹಾರಿಸಿದ್ದಾನೆ. ವಿದ್ಯಾರ್ಥಿಯ ಗುಂಡು ಶಿಕ್ಷಕರ ಭುಜಕ್ಕೆ ತಗುಲಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಗ್ಯವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ.ಘಟನೆಯ ನಂತರ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಗುರುವಾರ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕಾಶಿಪುರ) ಅಭಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಶಿಕ್ಷಕರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೂ ಹೊಡೆದಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿ ಸೇಡು ತೀರಿಸಲು ಈ ಹೆಜ್ಜೆ ಇಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪಿಸ್ತೂಲ್ ಶಾಲಾ ಬ್ಯಾಗಿನಲ್ಲಿ ತರಗತಿಗೆ ತಂದು, ಪಾಠ ಮುಗಿದ ಕೂಡಲೇ ಗುಂಡು ಹಾರಿಸಿದ್ದಾನೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ದೃಢಪಟ್ಟಿದೆ.ಗಾಯಗೊಂಡ ಶಿಕ್ಷಕರ ದೂರಿನ ಮೇರೆಗೆ ವಿದ್ಯಾರ್ಥಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 109 ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗೆ ಪಿಸ್ತೂಲ್ ಸಿಕ್ಕಿದ ಮಾರ್ಗದ ಬಗ್ಗೆ ತನಿಖೆ ಮುಂದುವರಿದಿದೆ.