ಚುನಾವಣಾ ಆಯೋಗ vs ರಾಹುಲ್ ಗಾಂಧಿ – ಜನರ ಕುತೂಹಲ ಹೆಚ್ಚಳ

ನವದೆಹಲಿ, ಆಗಸ್ಟ್​ 18: ಸಂಸದ ರಾಹುಲ್ ಗಾಂಧಿಯ ಮತಕಳವು ಆರೋಪಕ್ಕೆ ಸಂಬಂಧಿಸಿದಂತೆ ದೇಶದ ಜನರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ತಿಳಿಯೋಣ. ಖಾಸಗಿ ಸಂಸ್ಥೆ ವೋಟ್ ವೈಬ್ ರಾಹುಲ್ ಗಾಂಧಿ ಆರೋಪಕ್ಕೆ ಜನರ ಪ್ರತಿಕ್ರಿಯೆಯನ್ನು ಸಂಗ್ರಹಿಸಿದೆ. ಐದು ಪ್ರಶ್ನೆಗಳನ್ನು ಕೇಳಿ  ಎಷ್ಟು ಮಂದಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಇಲ್ಲಿ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತು ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ‘ಮತ ಕಳವು’ ಆರೋಪವನ್ನು ಆಧಾರರಹಿತ, ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

ರಾಹುಲ್​ ಗಾಂಧಿ ಚುನಾವಣಾ ಆಯೋಗದ ಮೇಲೆ ಮಾಡಿರುವ ಮತಕಳ್ಳತನ ಆರೋಪದ ಬಗ್ಗೆ ನೀವೇನು ಹೇಳುತ್ತೀರಿ? ಸಾರ್ವಜನಿಕರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಸುಮಾರು ಅರ್ಧದಷ್ಟು ಜನರು (48%) ಭಾರತ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿಯವರ ಮತ ಕಳ್ಳತನ ಆರೋಪಗಳನ್ನು  ಸತ್ಯವೆಂದು ಮತ್ತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಅದನ್ನು ಆಧಾರರಹಿತವೆಂದು ಪರಿಗಣಿಸಿದ್ದು ಕೇವಲ ಶೇ.27ರಷ್ಟು ಜನ ಮಾತ್ರ. 60 ವರ್ಷದವರಿಗಿಂತ ಮೇಲ್ಪಟ್ಟವರು ಇದನ್ನು ಹೆಚ್ಚಾಗಿ ನಂಬಿದ್ದಾರೆ. 18-23 ವರ್ಷದೊಳಗಿನವರು ಇದರ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಚುನಾವಣಾ ಫಲಿತಾಂಶ ಬಿಜೆಪಿಗೆ ಸಹಾಯ ಮಾಡಿದೆ ಎಂಬ ರಾಹುಲ್ ಗಾಂದಿ ಆರೋಪಗಳನ್ನು ನೀವು ಒಪ್ತೀರಾ? ಚುನಾವಣಾ ಆಯೋಗದ ಚುನಾವಣಾ ಫಲಿತಾಂಶವು ಬಿಜೆಪಿ ಸಹಾಯ ಮಾಡಿದೆ ಎಂದು ಒಪ್ಪದವರ ಸಂಖ್ಯೆಯೇ ಹೆಚ್ಚಿದೆ. ಶೇ.47ರಷ್ಟು ಮಂದಿ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಒಪ್ಪುವ ಜನರು ಶೇ.39ರಷ್ಟಿದ್ದಾರೆ. 60 ವರ್ಷ ಮೇಲ್ಪಟ್ಟ ಶೇ.60 ರಷ್ಟು ಮಂದಿ ಒಪ್ಪುವುದಿಲ್ಲ ಎಂದು ಹೇಳಿದ್ದರೆ, 46-60 ವರ್ಷದೊಳಗಿನ ಶೇ.44ರಷ್ಟು ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಚುನಾವಣಾ ಆಯೋಗ, ಚುನಾವಣಾ ಪ್ರಕ್ರಿಯೆ ಬಗ್ಗೆ ನಿಮಗೆ ನಂಬಿಕೆ ಎಷ್ಟಿದೆ?

ಭಾರತದ ಚುನಾವಣಾ ಆಯೋಗದ ಮೇಲೆ ನಂಬಿಕೆ ಎಷ್ಟಿದೆ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಅದರಲ್ಲಿ ಶೇ.38ರಷ್ಟು ಮಹಿಳೆಯರು ಆಯೋಗದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಪುರುಷರ ಸಂಖ್ಯೆ ಶೇ.25ರಷ್ಟು ಮಾತ್ರ. 46-60 ವರ್ಷ ವಯಸ್ಸಿನ ಶೇ.36ರಷ್ಟು ಮಂದಿ ಆಯೋಗದ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ನಂಬದವರ ಸಂಖ್ಯೆಯೇ ಹೆಚ್ಚಿದೆ. ಶೇ,.27ರಷ್ಟು ಮಂದಿ ನಂಬುವುದಿಲ್ಲ ಎಂದು ಹೇಳಿದ್ದರೆ, ಕೇವಲ ಶೇ.20ರಷ್ಟು ನಂಬುವುದಾಗಿ ಹೇಳಿದ್ದಾರೆ.