ಕೃಷ್ಣಾಷ್ಟಮಿ ಮೆರವಣಿಗೆಯಲ್ಲಿ ದುರಂತ – ರಥಕ್ಕೆ ತಂತಿ ತಗುಲಿ 5 ಸಾವು

ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತರನ್ನು ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ. 

ರಾಮಂತಪುರದ ಗೋಕುಲನಗರದಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ, ವಿದ್ಯುತ್‌ ಅವಘಡದಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.