ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ. ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ದೂರು ನೀಡಿದ್ದು, ಲೋಟಸ್ ಕ್ಯಾಪಿಟಲ್‌ನಿಂದ ಪಡೆದ ಸಾಲವನ್ನು ಹಿಂದಿರುಗಿಸದಿರುವ ಆರೋಪ ಮಾಡಿದ್ದಾರೆ.

ದೂರು ಪ್ರಕಾರ, ರಾಜೇಶ್ ಆರ್ಯ ಎಂಬ ಮೀಡಿಯೇಟರ್ ಮುಖಾಂತರ ಪರಿಚಯವಾದ ಶಿಲ್ಪಾ ಮತ್ತು ರಾಜ್, 2015ರಲ್ಲಿ ತಮ್ಮ ‘ಬೆಸ್ಟ್ ಡೀಲ್ ಟಿವಿ ಪ್ರೈ.ಲಿ.’ ಕಂಪನಿಗೆ 75 ಕೋಟಿ ರೂ. ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದರು. ಬಡ್ಡಿ ತಪ್ಪಿಸಲು, ಅದನ್ನು ಕಂಪನಿಯಲ್ಲಿ ಹೂಡಿಕೆ ಎಂಬಂತೆ ತೋರಿಸಿದ್ದರು. ಮೊದಲ ಕಂತಿನಲ್ಲಿ 31.95 ಕೋಟಿ ರೂ., ಎರಡನೇ ಕಂತಿನಲ್ಲಿ 28.54 ಕೋಟಿ ರೂ. ಸೇರಿ ಒಟ್ಟೂ 60.48 ಕೋಟಿ ರೂ. ನೀಡಲಾಯಿತು. ಪ್ರತೀ ತಿಂಗಳು ಮೊತ್ತವನ್ನು ಹಿಂತಿರುಗಿಸುವ ಭರವಸೆ ನೀಡಿದರೂ, ಅದನ್ನು ಈಡೇರಿಸಲಿಲ್ಲ.

ಸೆಪ್ಟೆಂಬರ್ 2016ರಲ್ಲಿ ಶಿಲ್ಪಾ ನಿರ್ದೇಶಕಿ ಹುದ್ದೆಯಿಂದ ರಾಜೀನಾಮೆ ನೀಡಿದ ಬಳಿಕ, ದೀಪಕ್ ಅವರಿಗೆ ದಂಪತಿಯ ಹಿಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಿಕ್ಕಿತು. ಇದೀಗ ಹಣವನ್ನು ಮರಳಿಸದ ಕಾರಣ, ಜುಹು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ಆರ್ಥಿಕ ಅಪರಾಧಗಳ ವಿಭಾಗದ ತನಿಖೆಯಲ್ಲಿದೆ.

