‘ಪ್ರಕಾಶ್ ರಾಜ್ ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಸೇರುತ್ತಾರೆ’ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ. ‘ಅವರು ಪ್ರಯತ್ನಿಸಿದ್ದಾರೆ ಅಂತ ನಾನು ಭಾವಿಸಿದ್ದೇನೆ. ನನ್ನನ್ನು ಖರೀದಿಸುವಷ್ಟು ಅವರು ಸೈದ್ಧಾಂತಿಕವಾಗಿ ಶ್ರೀಮಂತವಾಗಿಲ್ಲ ಅಂತ ಅವರಿಗೆ ಅರ್ಥವಾದಂತಿದೆ’ ಎಂದು ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಬಹುಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟ ಪ್ರಕಾಶ್ ರಾಜ್ (Prakash Raj) ಅವರು ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಅನೇಕ ಸಂದರ್ಭಗಳಲ್ಲಿ ಟೀಕಿಸಿದ್ದಾರೆ. ಸರ್ಕಾರಗಳು ತೆಗೆದುಕೊಳ್ಳುವ ನಿಲುವುಗಳ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ನೇರ ನುಡಿಗಳಿಂದ ತಿಳಿಸಿದ್ದಾರೆ. ಈಗ ಅವರು ಬಿಜೆಪಿ (BJP) ಪಕ್ಷಕ್ಕೆ ಸೇರುತ್ತಾರೆ ಎಂದು ಗಾಸಿಪ್ ಹಬ್ಬಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಈ ಗಾಳಿ ಸುದ್ದಿಗೆ ಪ್ರಕಾಶ್ ರಾಜ್ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ಖ್ಯಾತ ನಟ ಪ್ರಕಾಶ್ ರಾಜ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆ’ ಎಂದು ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರು ಪ್ರಯತ್ನಿಸಿದ್ದಾರೆ ಅಂತ ನಾನು ಭಾವಿಸಿದ್ದೇನೆ. ನನ್ನನ್ನು ಕೊಂಡುಕೊಳ್ಳುವಷ್ಟು ಅವರು ಸೈದ್ಧಾಂತಿಕವಾಗಿ ಶ್ರೀಮಂತವಾಗಿಲ್ಲ ಎಂಬುದು ಅವರಿಗೆ ಅರ್ಥ ಆಗಿರಬೇಕು. ನಿಮಗೆ ಏನು ಅನಿಸುತ್ತೆ ಸ್ನೇಹಿತರೇ. ಜಸ್ಟ್ ಆಸ್ಕಿಂಗ್’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಕೆಲವು ನಡೆಯನ್ನು ಪ್ರಕಾಶ್ ರಾಜ್ ಅವರು ಕಟುವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲೂ ಕೂಡ ಅವರು ಸರಣಿ ಪೋಸ್ಟ್ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಸೂಕ್ತ ಅನುದಾನ ಸಿಕ್ಕಿಲ್ಲ ಎಂಬುದನ್ನು ಕೂಡ ಅವರು ಖಂಡಿಸಿದ್ದಾರೆ.
ನರೇಂದ್ರ ಮೋದಿ ಅವರು ನವಿಲಿಗೆ ಕಾಳು ತಿನ್ನಿಸುತ್ತಿರುವ ಫೋಟೋವನ್ನು ಹಾಗೂ ನವಿಲುಗರಿಯಲ್ಲಿ ಹಿಡಿದುಕೊಂಡಿರುವ ಮತ್ತೊಂದು ಫೋಟೋವನ್ನು ಪ್ರಕಾಶ್ ರಾಜ್ ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ. ‘ಹುಷಾರ್ರಪ್ಪಾ! ಮೊದ್ಲು ಕಾಳಾಕಿ. ಆಮೇಲೆ ಪುಕ್ಕ ಕಿತ್ಕೊತಾರೆ’ ಎಂದು ಅದಕ್ಕೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಇಂಥ ಅನೇಕ ಪೋಸ್ಟ್ಗಳ ಮೂಲಕ ಪ್ರಕಾಶ್ ರಾಜ್ ಅವರು ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.