ಬೆಂಗಳೂರು: ಸಚಿವ ಸ್ಥಾನಕ್ಕೆ ಸಹಕಾರಿ ಸಚಿವ ರಾಜಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.

ಆರಂಭದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಹೇಳಿಕೆ ನೀಡಿ ರಾಜಣ್ಣ ಸಂಚಲನ ಮೂಡಿಸಿದ್ದರು. ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡಿದ ನಂತರ ರಾಜಣ್ಣ ನಮ್ಮ ಅವಧಿಯಲ್ಲಿ ಮತಪಟ್ಟಿ ಸಿದ್ಧವಾಗಿತ್ತು ಎಂದು ಹೇಳಿದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ ಎಂದು ರಾಜಣ್ಣ ಪ್ರಶ್ನಿಸಿದ್ದರು. ರಾಜಣ್ಣ ಅವರ ಈ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಈ ಹೇಳಿಕೆಯ ನಂತರ ಹೈಕಮಾಂಡ್ ರಾಜಣ್ಣಗೆ ರಾಜೀನಾಮೆ ಸಲ್ಲಿಸಲು ಸೂಚನೆ ನೀಡಿತ್ತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಸಿಎಂಗೆ ಕರೆ ಮಾಡಿ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ರಾಜಣ್ಣ ಹೇಳಿದ್ದೇನು?
ಮತಗಳ್ಳತನ ಎಂದು ನಾವು ಹೇಳುತಿದ್ದೇವೆ. ಇದು ನಡೆದಿರೋದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೆ ಈಗ ಹೇಳುತ್ತಿರುವುದು ನಮಗೆ ನಾಚಿಕೆ ಆಗಬೇಕು. ನಮ್ಮದೇ ಸರ್ಕಾರ ಇದ್ದಾಗ ವೋಟರ್ ಲಿಸ್ಟ್ ಮಾಡಿದ್ದು, ಆಗೇನು ಕಣ್ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸುವ ಮೂಲಕ ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ವೋಟರ್ ಲಿಸ್ಟ್ ಎಲ್ಲಾ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ? ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದ್ದರು. ಅಲ್ಲದೇ ಈ ಅಕ್ರಮಗಳು ನಡೆದಿರೋ ಸತ್ಯ. ಇದರಲ್ಲಿ ಯಾವುದೇ ಸುಳ್ಳು ಏನಿಲ್ಲ. ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದವಲ್ಲಾ ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
