ಜ್ಯುವೆಲ್ಲರಿ ಅಂಗಡಿಗೆ ವಂಚಿಸಿ ; ಪತ್ನಿಯೊಂದಿಗೆ ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿ ಅರೆಸ್ಟ್​ 

ಬೆಂಗಳೂರು : ಜ್ಯುವೆಲ್ಲರಿ ಅಂಗಡಿಯಿಂದ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಮನೀಶ್ ಕುಮಾರ್ ಸೋನಿ ಬಂಧಿತ ಆರೋಪಿ.

ಬಂಧಿತನಿಂದ 8.53 ಲಕ್ಷ ನಗದು, ಚಿನ್ನಾಭರಣ ಸಹಿತ ಒಟ್ಟು 2.5 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಕಸಾಲಿಗನಾಗಿದ್ದ ಮನೀಶ್ ಕುಮಾರ್ ಸೋನಿ 4 ವರ್ಷಗಳಿಂದಲೂ ಜಯನಗರ 3ನೇ ಬ್ಲಾಕ್‌ನಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಚಿನ್ನಾಭರಣಗಳನ್ನು ತಯಾರಿಸಿ ಕೊಡುತ್ತಿದ್ದ. ಆದರೆ ಏಪ್ರಿಲ್‌ನಿಂದ ಜೂನ್‌ವರೆಗೆ ಪಡೆದುಕೊಂಡಿದ್ದ 8 ಕೆಜಿ 351 ಗ್ರಾಂ ಚಿನ್ನದ ಗಟ್ಟಿಯಲ್ಲಿ ಆಭರಣವನ್ನೂ ತಯಾರಿಸಿಕೊಡದೆ, ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದ. ನಂಬಿಕೆ ದ್ರೋಹವೆಸಗಿದ್ದ ಆರೋಪಿಯ ವಿರುದ್ಧ ಜ್ಯುವೆಲ್ಲರಿ ಶಾಪ್​ ಮಾಲೀಕ ವಿಶಾಲ್ ಅವರು ಜಯನಗರ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಗೋವಾದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮೋಜು ಮಸ್ತಿಯ ಗೀಳಿಗೆ ಬಿದ್ದಿದ್ದ ಆರೋಪಿ ಪತ್ನಿಯೊಂದಿಗೆ ಗೋವಾದಲ್ಲಿ ಪಾರ್ಟಿಯಲ್ಲಿದ್ದಾಗಲೇ ಆತನನ್ನು ಬಂಧಿಸಲಾಗಿದೆ. ಬಳಿಕ ಆತನ ಮನೆಯಲ್ಲಿರಿಸಿದ್ದ 3 ಕೆಜಿ 36 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಆತ ಅಡಮಾನವಿಟ್ಟಿದ್ದ ಚಿನ್ನದ ಗಟ್ಟಿ, ನಗದು ಸಹಿತ ಒಟ್ಟು 2.5 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.