ನವದೆಹಲಿ: ಸುಂಕ ಸಮರ ಆರಂಭಿಸಿದ ಅಮೆರಿಕಕ್ಕೆ ಭಾರತ ಮತ್ತೆ ತಿರುಗೇಟು ನೀಡಿದ್ದು, ಬೋಯಿಂಗ್ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ.
ಮೇ 2021 ರಲ್ಲಿ ಆರು ಹೆಚ್ಚುವರಿ ವಿಮಾನಗಳ ಮಾರಾಟಕ್ಕೆ ಅಮೆರಿಕ ಸರ್ಕಾರ ಅನುಮೋದನೆ ನೀಡಿತ್ತು. ಆರಂಭದಲ್ಲಿ ಈ ವಿಮಾನ ಖರೀದಿಗೆ 2.42 ಬಿಲಿಯನ್ ಡಾಲರ್ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಇತರ ಜಾಗತಿಕ ಸಮಸ್ಯೆಯಿಂದ ಖರೀದಿ ವೆಚ್ಚ 3.6 ಬಿಲಿಯನ್ ಡಾಲರ್‌ಗೆ ಈಗ ಏರಿಕೆಯಾಗಿದೆ.
ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ್ದಕ್ಕೆ ಡೊನಾಲ್ಡ್ ಟ್ರಂಪ್ ಭಾರತದ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ್ದರು. ಈಗ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ಹಾಕಿದ್ದಾರೆ. ಹೀಗಾಗಿ ಈಗ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಲಾಗಿದೆ.

