ಮೈಸೂರು, ಆಗಸ್ಟ್ 06: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆ ಕಲರವ ಜೋರಾಗಿದೆ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಬಂದ ಕ್ಯಾಪ್ಟನ್ ಅಭಿಮನ್ಯು ಆ್ಯಂಡ್ ತಂಡ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಗಜಪಡೆ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಈ ಗಜಪಡೆ ಮೈಸೂರಿನಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ಮಾವುತರು, ಕಾವಾಡಿಗಳು ಮತ್ತು ಉಸ್ತುವಾರಿ ಸಿಬ್ಬಂದಿಗೆ 2.04 ಕೋಟಿ ರೂ. ಮೊತ್ತದ ವಿಮೆ ಸೌಲಭ್ಯ ಒದಗಿಸಲಾಗಿದೆ.

2.04 ಕೋಟಿ ರೂ. ಮೊತ್ತದ ವಿಮೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದೆ. ಇತ್ತ ಗಜಪಡೆ ಕೂಡ ಮೈಸೂರಿಗೆ ಬಂದಿದೆ. ಈ ಗಜಪಡೆ ಮೈಸೂರಲ್ಲಿರುವಾಗ ಏನಾದರೂ ಹಾನಿ ಸಂಭವಿಸಿದರೆ ಅದರ ನಷ್ಟ ಪರಿಹರಿಸಲು ಅರಣ್ಯ ಇಲಾಖೆಯಿಂದ ವಿಮಾ ಸೌಲಭ್ಯದ ಮೊರೆ ಹೋಗಲಾಗಿದೆ. ಆಗಸ್ಟ್ 4ರಿಂದ ಅಕ್ಟೋಬರ್ 5ರವರೆಗೆ ಈ ಸುರಕ್ಷತೆ ಚಾಲ್ತಿಯಲ್ಲಿರಲಿದೆ. ಟೆಂಡರ್ ಮೂಲಕ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವಿಮೆ ಸೌಲಭ್ಯ ಮಾಡಿಸಲಾಗಿದೆ.
ದಸರಾ ಗಜಪಡೆಯ 14 ಆನೆಗಳ ಪೈಕಿ ಈ ಬಾರಿ 10 ಗಂಡಾನೆಗಳಿವೆ. ಈ ಗಂಡಾನೆಗಳಿಗೆ ತಲಾ 5 ಲಕ್ಷ ರೂ, 4 ಹೆಣ್ಣಾನೆಗಳಿಗೆ ತಲಾ 4.5 ಲಕ್ಷ ರೂ. 14 ಆನೆಗಳಿಗೆ ಒಟ್ಟು 68 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. 14 ಮಾವುತರು, 14 ಕಾವಾಡಿಗಳು, ಡಿಸಿಎಫ್, ಇಬ್ಬರು ಆರ್‌ಎಫ್‌ಓ, ಪಶುವೈದ್ಯಾಧಿಕಾರಿ, ಓರ್ವ ಸಹಾಯಕರು, 10 ಮಂದಿ ವಿಶೇಷ ಮಾವುತರು ಸೇರಿ ಒಟ್ಟು 43 ಮಂದಿಗೆ ತಲಾ 2 ಲಕ್ಷ ರೂ.ನಂತೆ 86 ಲಕ್ಷ ರೂ. ಮೊತ್ತದ ವಿಮೆ ಸೌಲಭ್ಯ ನೀಡಲಾಗಿದೆ.
ಮೈಸೂರಿನಲ್ಲಿ ದಸರಾ ಆನೆಗಳಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಅಥವಾ ಸಾರ್ವಜನಿಕರಿಗೆ ತೊಂದರೆಯಾದರೆ ನಷ್ಟ ಭರಿಸಲು 50 ಲಕ್ಷ ರೂ. ಒಟ್ಟು 2.04 ಕೋಟಿ ರೂ. ಮೊತ್ತದ ವಿಮೆ ಮಾಡಿಸಿದ್ದು, ಇದಕ್ಕೆ ಅರಣ್ಯ ಇಲಾಖೆಯಿಂದ 67 ಸಾವಿರ ರೂ ಪ್ರಿಮಿಯಂ ಮೊತ್ತ ಪಾವತಿ ಮಾಡಲಾಗುವುದು.
ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿಗೆ ಬರ್ತಿದ್ದಂತೆಯೇ, ರಕ್ತ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ. ಆಗಸ್ಟ್ 10ರಂದು ದಸರಾ ಗಜಪಡೆ ಮೈಸೂರು ಅರಮನೆಗೆ ಎಂಟ್ರಿ ಕೊಡಲಿವೆ. ಇದೇ ಮೂದಲ ಬಾರಿಗೆ ಸಂಜೆ ವೇಳೆ ಗಜಪಡೆಯನ್ನ ಅರಮನೆಗೆ ಸ್ವಾಗತಿಸಲಾಗುತ್ತಿದೆ.

