ಮೈಸೂರು: ಸೇತುವೆ ಮುರಿದು ಬಿದ್ದು ಭತ್ತ ಸಾಗಿಸುತ್ತಿದ್ದ ಲಾರಿ ನಾಲೆಗೆ ಬಿದ್ದಿರುವ ಘಟನೆ ಸರಗೂರು ತಾಲೂಕಿನ ಹಾಲುಗಡ ಗಣೇಶನ ಗುಡಿ ಬಳಿ ನಡೆದಿದೆ.

ಸರಗೂರು ತಾಲೂಕಿನ ಬಲದಂಡೆ ನಾಲೆ ಸೇತುವೆ ಕುಸಿದು ಬಿದ್ದಿದ್ದು, ಶ್ರೀ ಚಿಕ್ಕದೇವಮ್ಮನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿರುವ ಸೇತುವೆ ಇದಾಗಿದೆ.
ಇಟ್ನ ಗ್ರಾಮದಿಂದ ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ (ಟಿಎನ್.52, 8333) ಲಾರಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸೇತುವೆ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಕೆ.ಉಷಾ ಹಾಗೂ ಸರಗೂರು ಠಾಣೆಯ ಎಸ್‌ಐ ಕಿರಣ್ ಕುಮಾರ್ ಘಟನಾ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಕೆ.ಉಷಾ, “ಹಳೆ ಸೇತುವೆಯಲ್ಲಿ ಹೆಚ್ಚು ವಾಹನಗಳು ಓಡಾಡಬಾರದು ಎಂದು ಮುಂಜಾಗ್ರತೆ ವಹಿಸುವಂತೆ ಈ ಭಾಗದ ರೈತರಿಗೆ ಹೇಳಿದ್ದೆವು. ಆದರೂ ಈ ಸೇತುವೆ ಮೂಲಕ ದೊಡ್ಡ ವಾಹನಗಳು ವೇಗವಾಗಿ ಚಲಿಸುತ್ತಿವೆ. ಸುಮಾರು ವರ್ಷ ಹಳೆಯ ಸೇತುವೆ ಇದಾಗಿದ್ದು, ಶಿಥಿಲವಾದ ಕಾರಣ ಘಟನೆ ನಡೆದಿದೆ” ಎಂದರು.
“ಚಿಕ್ಕ ದೇವಮ್ಮನ ಬೆಟ್ಟಕ್ಕೆ ಹೋಗುವ ಸೇತುವೆ ತುಂಬಾ ಶಿಥಿಲವಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ವಾಹನಗಳು ತಿರುಗಾಡದಂತೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ರಾತ್ರಿ ವೇಳೆಯಲ್ಲಿ ಲಾರಿ ಡ್ರೈವರ್ಗಳು ಬ್ಯಾರಿಕೇಡ್ಗಳನ್ನು ಬದಿಗೆ ಸರಿಸಿ ಸಂಚಾರ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ರೈತರ ಅನುಕೂಲಕ್ಕೆ ತಾತ್ಕಾಲಿಕವಾಗಿ ಬೇರೆ ಸೇತುವೆ ನಿರ್ಮಾಣ ಮಾಡಲು ಮುಂದಾಗುತ್ತೇವೆ” ಎಂದು ಹೇಳಿದರು.

