‘ಆಪರೇಷನ್ ಸಿಂಧೂರ್’ ಸಂಸತ್ ಚರ್ಚೆ – ಜನರ ಪ್ರತಿಕ್ರಿಯೆ ಹೇಗಿದೆ?

ನವದೆಹಲಿ, ಆಗಸ್ಟ್​ 04: ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಬಾರಿಯ ಪ್ರಮುಖ ವಿಷಯವಸ್ತು ಎಂದರೆ ಅದು ಆಪರೇಷನ್ ಸಿಂಧೂರ್ ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಚರ್ಚೆಗಾಗಿ ಒತ್ತಾಯಿಸಿದ್ದವು. ಜುಲೈ 28ರಿಂದ ಎರಡು ದಿನಗಳ ಕಾಲ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಪರೇಷನ್​ ಸಿಂಧೂರ್​ ಕುರಿತ ಚರ್ಚೆ ಹಾಗೂ ಪ್ರಶ್ನೋತ್ತರಗಳು ನಡೆದವು. ಇದೀಗ ಖಾಸಗಿ ಸಂಸ್ಥೆ ವೋಟ್ ವೈಬ್ ಸದನದಲ್ಲಿ ನಡೆದ ಆಪರೇಷನ್ ಸಿಂಧೂರ್​ ಬಗೆಗಿನ ಚರ್ಚೆ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಹಾಗಾದರೆ ಅಂದಿನ ಚರ್ಚೆ ಬಗ್ಗೆ ಜನರು ಏನೇನು ಹೇಳಿದ್ದಾರೆ ನೋಡೋಣ.

ಮೊದಲ ಪ್ರಶ್ನೆ

ನಿಮ್ಮ ಪ್ರಕಾರ, ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಮೇಲುಗೈ ಯಾರದ್ದಿತ್ತು? ಆಪರೇಷನ್ ಸಿಂಧೂರ್ ಕುರಿತು ವೋಟ್ ವೈಬ್ ನಡೆಸಿದ ವೀಕ್ಲಿ ವೈಬ್ ಸಮೀಕ್ಷೆ ಪ್ರಕಾರ, ಈ ಚರ್ಚೆಯಲ್ಲಿ ಸರ್ಕಾರವೇ ಮೇಲು ಗೈ ಸಾಧಿಸಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಶೇ.33.6ರಷ್ಟು ಜನರು ಪ್ರತಿಪಕ್ಷಗಳು ಎಂದು ಹೇಳಿದ್ದರೆ, ಶೇ.43.4ರಷ್ಟು ಮಂದಿ ಸರ್ಕಾರವೇ ಮೇಗೈ ಸಾಧಿಸಿದೆ ಎಂದು ಹೇಳಿದೆ. ಅದರಲ್ಲಿ 35-44ವರ್ಷದವರು ಹಾಗೂ 55 ವರ್ಷಕ್ಕಿಂತ ಮೇಲ್ಪಟ್ಟವರು ಸರ್ಕಾರವನ್ನು ಬೆಂಬಲಿಸಿದ್ದಾರೆ.

ಎರಡನೇ ಪ್ರಶ್ನೆ

ನಿಮ್ಮ ಪ್ರಕಾರ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತಿನಲ್ಲಿ ಅತ್ಯುತ್ತಮ ಭಾಷಣ ಮಾಡಿದವರು ಯಾರು? ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ಅತ್ಯುತ್ತಮವಾಗಿ ಮಾತನಾಡಿದ್ದು, ಪ್ರಧಾನಿ ಮೋದಿ ಎಂದು ಶೇ.34 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಹುಲ್ ಗಾಂಧಿ ಎಂದು ಶೇ.27.2ರಷ್ಟು ಮಂದಿ ಹೇಳಿದ್ದರೆ, ಪ್ರಿಯಾಂಕಾ ಗಾಂಧಿ ಎಂದು ಶೇ.12.4ರಷ್ಟು ಮಂದಿ ಹೇಳಿದ್ದಾರೆ. ಶೇ.40ರಷ್ಟು ಪುರುಷರು ಮೋದಿಯವರನ್ನು ಬೆಂಬಲಿಸಿದರೆ, ಶೇ.31ರಷ್ಟು ಮಹಿಳೆಯರು ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ.

ಮೂರನೇ ಪ್ರಶ್ನೆ

ಸಂಸತ್ತಿನಲ್ಲಿ ನಡೆದ ಚರ್ಚೆಯ ಆಧಾರದ ಮೇಲೆ, ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂಬುದನ್ನು ನೀವು ಒಪ್ಪುತ್ತೀರಾ? ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಟ್ರಂಪ್ ಪಾತ್ರವಿದೆ ಎಂದು ಟ್ರಮಪ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ಈ ಚರ್ಚೆಯ ಬಳಿಕ ನೀವು ನಂಬುತ್ತೀರಾ ಎಂದು ಕೇಳಲಾಗಿತ್ತು. ಶೇ.44.5ರಷ್ಟು ಮಂದಿ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಶೇ.39ರಷ್ಟು ಮಂದಿ ಒಪ್ಪುತ್ತೇವೆ ಎಂದಿದ್ದಾರೆ. ನಂಬುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಶೇ.58ರಷ್ಟು 55 ವರ್ಷಕ್ಕಿಂತ ಹೆಚ್ಚಿನವರು ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ನಾಲ್ಕನೇ ಪ್ರಶ್ನೆ

ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಗುಣಮಟ್ಟವನ್ನು ನೀವು ಹೇಗೆ ನಿರ್ಣಯಿಸುತ್ತೀರಿ? ಬಹುಪಾಲು ಜನರು ಈ ಚರ್ಚೆಯನ್ನು ರಾಜಕೀಯ ಪ್ರೇರಿತವೆಂದು ಕಾಣುತ್ತಿದ್ದಾರೆ. ಶೇ.47.7 ರಷ್ಟು ಮಂದಿ ರಾಯಜೀಯ ಪ್ರೇರಿತ ಎಂದು ಹೇಳಿದ್ದು, ಶೇ.25.5ರಷ್ಟು ಮಂದಿ ತೃಪ್ತಿದಾಯಕವಾಗಿದೆ ಎಂದು, ಶೇ.,15.2ರಷಟು ಮಂದಿ ನಿರಾಶದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐದನೇ ಪ್ರಶ್ನೆ

ಬಿಹಾರದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೇ? ಸಂಸತ್ತಿನಲ್ಲಿ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಜನರು ಕೇಳಿದ್ದಾರೆ. ಶೇ.49.8ರಷ್ಟು ಮಂದಿ ಈ ಚರ್ಚೆ ಬಯಸಿದ್ದಾರೆ. ಶೇ.55ರಷ್ಟು ಪುರುಷರು ಹಾಗೂ ಶೇ.44ರಷ್ಟು ಮಹಿಳೆಯರು ಇದನ್ನು ಬೆಂಬಲಿಸಿದ್ದಾರೆ.

ಸಮೀಕ್ಷೆಯ ಒಟ್ಟು ಸಾರಾಂಶ

ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂಧೂರ್ ಮೇಲಿನ ಚರ್ಚೆ ತೃಪ್ತಿದಾಯಕವಾಗಿದೆ, ಪ್ರಧಾನಿ ಮೋದಿಯ ಭಾಷಣವನ್ನು ಹೆಚ್ಚು ಮಂದಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ಬಯಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಆಪರೇಷನ್ ಸಿಂಧೂರ್ ಎಂದರೇನು?

ಏಪ್ರಿಲ್​ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆಗೈದಿದ್ದರು. ಇದರ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು.