ಶಿರೂರಿನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ – ಜಿಲ್ಲಾಧಿಕಾರಿಯಿಂದ ನಿಷೇಧದ ಆದೇಶ

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿರುವ ಎಲ್‌ಸಿ ಗೇಟ್ ಸಂಖ್ಯೆ 71ರ ಮೂಲಕ ನಡೆಯುತ್ತಿರುವ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಈ ನಿರ್ಧಾರದ ಹಿನ್ನೆಲೆ – ಗೇಟ್ ಮುಚ್ಚುವ ವೇಳೆ (ದಿನಕ್ಕೆ 40–50 ರೈಲು ಸಂಚಾರ) ಸಾರ್ವಜನಿಕರ ಸಂಚಾರಕ್ಕೆ ಉಂಟಾಗುತ್ತಿದ್ದ ಅಡಚಣೆ.

ಬದಲಿ ಮಾರ್ಗವಾಗಿ, ಶಿರೂರು ಟೋಲ್‌ಗೇಟ್‌ನಿಂದ 500 ಮೀಟರ್ ಹಿಂದಿರುವ ದುರ್ಗಾಂಬಿಕಾ ಹಾಲ್ ಮತ್ತು ಶಿರೂರು ಕೆರೆಕಟ್ಟೆ ಬಸ್ ನಿಲ್ದಾಣದ ಬಳಿ ಇರುವ ರಸ್ತೆ ಮೂಲಕ ರೈಲ್ವೇ ಓವರ್ ಬ್ರಿಡ್ಜ್ ಮೂಲಕ ಸಂಚರಿಸುವಂತೆ ಸೂಚನೆ ನೀಡಲಾಗಿದೆ. ಹೊಸದಾಗಿ ನಿರ್ಮಾಣವಾದ ಈ ರಸ್ತೆ ಎಲ್ಲಾ ಋತುಗಳಲ್ಲಿ ಸಂಚಾರಯೋಗ್ಯವಾಗಿದೆ.

ಅಲ್ಲದೆ, ಎಲ್‌ಸಿ ಗೇಟ್ ಬಳಿ ಪಾದಚಾರಿಗಳಿಗೆ ಸುರಕ್ಷಿತ ದಾಟುವ ವಿಕೇಟ್ ಗೇಟ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ವಾಹನಚಾಲಕರು ಹೊಸ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.