ಕೃಷಿ ಅಧಿಕಾರಿ ಮನೆಯ ಬೀಗ ಮುರಿದ ದುಷ್ಕರ್ಮಿಗಳು – 26 ಲಕ್ಷದ ಚಿನ್ನಾಭರಣ ಕಳವು

ಬೀದರ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಗುರುನಗರ ಕಾಲೊನಿಯಲ್ಲಿ ನಡೆದಿದೆ.

ಔರಾದ್ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದ ದೂಳಪ್ಪ ಹೊಸಳ್ಳಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.

ಘಟನೆ ನಡೆದ ದಿನ, ದಂಪತಿ ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ ಖದೀಮರು ಮನೆ ಬೀಗ ಮುರಿದು ಒಳನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ 310 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ಸೇರಿದಂತೆ ಒಟ್ಟು 26 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ದಂಪತಿ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.