
ನವದೆಹಲಿ, ಜುಲೈ 23: ಅನಾರೋಗ್ಯವನ್ನು ಉಲ್ಲೇಖಿಸಿ ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಎರಡು ದಿನಗಳ ನಂತರ, ಭಾರತೀಯ ಚುನಾವಣಾ ಆಯೋಗ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ಆಯೋಗದ ಹೇಳಿಕೆ ಹೀಗಿದೆ:
ಭಾರತದ ಸಂವಿಧಾನದ ವಿಧಿ 324ರ ಪ್ರಕಾರ, ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಪೂರ್ಣ ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕಿದೆ. ಈ ಚುನಾವಣಾ ಪ್ರಕ್ರಿಯೆ “ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆ, 1952” ಮತ್ತು ಅದರ ಅಡಿಯಲ್ಲಿ ರೂಪಿಸಲಾದ “ಚುನಾವಣಾ ನಿಯಮಗಳು, 1974″ರ ಪ್ರಕಾರ ನಡೆಯಲಿದೆ.
ಆಧಾರದ ಮೇಲೆ, 2025ರ ಉಪ ರಾಷ್ಟ್ರಪತಿ ಚುನಾವಣೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಆಯೋಗ ಈಗಾಗಲೇ ಆರಂಭಿಸಿದೆ. ಪೂರ್ವಸಿದ್ಧತೆಗಳು ಮುಗಿಯುತ್ತಿದ್ದಂತೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಧನಕರ್ ರಾಜೀನಾಮೆಯ ಹಿನ್ನೆಲೆ:
74 ವರ್ಷದ ಜಗದೀಪ್ ಧನಕರ್ ಅವರು ಜುಲೈ 21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ. “ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.
ಜಗದೀಪ್ ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಕಾರ್ಯಾವಧಿ 2027ರ ಆಗಸ್ಟ್ 10ರ ವರೆಗೆ ಇರುತ್ತಿತ್ತು. ರಾಜ್ಯಸಭೆಯ ಸಭಾಪತಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದ ಧನಕರ್ ಅವರು, ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿಯೂ ಪಾಲ್ಗೊಂಡಿದ್ದರು.

