ರಾಜ್ಯದಲ್ಲಿ ಜಾತಿ ಗಣತಿಗೆ ದಿನಾಂಕ ನಿಗದಿ – ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ

ಬೆಂಗಳೂರು, ಜುಲೈ 23: ರಾಜ್ಯದಲ್ಲಿ ಬಹುನಿರೀಕ್ಷಿತ ಜಾತಿ ಗಣತಿಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಸಲು ನಿರ್ಧಾರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಮೀಕ್ಷೆ ಪೂರ್ವ ಸಿದ್ಧತೆಗಳು ಈಗಾಗಲೇ ಆರಂಭವಾಗಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ ಕೊನೆಗೂ ಸಮೀಕ್ಷೆಯ ಪೂರ್ಣ ವರದಿ ಸಿದ್ಧವಾಗಬೇಕು ಎಂಬ ಗಡುವು ನೀಡಲಾಗಿದೆ.

ಸಮೀಕ್ಷೆ ಸುದೃಢ, ಪಾರದರ್ಶಕವಾಗಿ ನಡೆಯಬೇಕು:

ಸಮೀಕ್ಷೆ ಅತ್ಯಂತ ವೈಜ್ಞಾನಿಕ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಸಮುದಾಯ ಸಮೀಕ್ಷೆಯಿಂದ ಹೊರಗುಳಿಯದಂತೆ ಖಚಿತಪಡಿಸಬೇಕು ಎಂದು ಸಿಎಂ ಸೂಚಿಸಿದರು.

ಈ ಹಿಂದೆ ಕಾಂತರಾಜು ಆಯೋಗವು 54 ಪ್ರಶ್ನೆಗಳೊಂದಿಗೆ ಕೈಗೊಂಡಿದ್ದ ಜಾತಿ ಸಮೀಕ್ಷೆ manual ಆಗಿ ನಡೆದಿತ್ತು. ಈ ಬಾರಿ ಇನ್ನಷ್ಟು ಅಂಶಗಳನ್ನು ಸೇರಿಸಲು ಪರಿಶೀಲನೆ ನಡೆಯಲಿದೆ. ವಿಶೇಷವೆಂದರೆ, ಈ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ, ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅಧ್ಯಯನಕ್ಕೂ ಸೂಚನೆ ನೀಡಲಾಗಿದೆ.

ಸಮೀಕ್ಷೆಯ ಮೇಲುಸ್ತುವಾರಿ ಹಾಗೂ ಸಿಬ್ಬಂದಿ ನಿಯೋಜನೆ:

ಸಮೀಕ್ಷೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಸಮೀಕ್ಷೆ ವಿಚಾರಗಳ ಅಂತಿಮ ನಿರ್ಧಾರಕ್ಕೆ ತಜ್ಞರ ಸಮಿತಿಯ ಸಹಕಾರ ಪಡೆಯಲಾಗುವುದು. ಈ ಬಾರಿಗೆ ಸುಮಾರು 1.65 ಲಕ್ಷ ಗಣತಿದಾರರು ಸೇರಿದಂತೆ ಅಗತ್ಯವಿರುವ ಮಾನವ ಸಂಪನ್ಮೂಲ ಬಳಸಲಾಗುತ್ತದೆ. ಇದರಲ್ಲಿ ಶಿಕ್ಷಕರು ಹಾಗೂ ಇತರ ಇಲಾಖೆಗಳ ಸಿಬ್ಬಂದಿಯನ್ನೂ ಸೇವೆಗೆ ನಿಯೋಜಿಸಲಾಗುವುದು.

ಸರ್ವ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಈ ಮಹತ್ವದ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.